ಯುನೆಸ್ಕೋ ಆಡಳಿತ ಮಂಡಳಿಗೆ ಭಾರತ ಮರುಆಯ್ಕೆ

ಹೊಸದಿಲ್ಲಿ, ನ.೧೮- ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ಆಡಳಿತ ಮಂಡಳಿಗೆ ೨೦೨೧-೨೦೨೫ರ ಅವಧಿಗೆ ೧೬೪ ಮತಗಳನ್ನು ಪಡೆಯುವ ಮೂಲಕ ಭಾರತ ಏಷ್ಯನ್ ಮತ್ತು ಫೆಸಿಫಿಕ್ ದೇಶಗಳ ೪ನೇ ಗುಂಪಿಗೆ ಮರು ಆಯ್ಕೆ ಆಗಿದೆ. ಅಲ್ಲದೆ ಜಪಾನ್, ಫಿಲಿಫೀನ್ಸ್, ವಿಯೇಟ್ನಾಂ, ಕುಕ್ ದ್ವೀಪ ಮತ್ತು ಚೀನಾ ಕೂಡಾ ಈ ಗುಂಪಿಗೆ ಆಯ್ಕೆಯಾಗಿವೆ.
“ಯುನೆಸ್ಕೊ ಆಡಳಿತ ಮಂಡಳಿಗೆ ೨೦೨೧-೨೫ರ ಅವಧಿಗೆ ೧೬೪ ಮತಗಳನ್ನು ಪಡೆದು ಭಾರತ ಮರು ಆಯ್ಕೆಯಾಗಿದೆ” ಎಂದು ಭಾರತದ ಪರವಾಗಿ ಕಾರ್ಯನಿರ್ವಹಿಸುವ, ಪ್ಯಾರೀಸ್ ಮೂಲದ ಯುನೆಸ್ಕೊದ ಕಾಯಂ ನಿಯೋಗ ಟ್ವೀಟ್ ಮಾಡಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ), ವಿಶ್ವಸಂಸ್ಥೆಯ ಮೂರು ಸಂವಿಧಾನಾತ್ಮಕ ಅಂಗಗಳಲ್ಲಿ ಒಂದು. ಇತರ ಎರಡು ಅಂಗಗಳೆಂದರೆ ಜನರಲ್ ಕಾನ್ಫರೆನ್ಸ್ ಹಾಗೂ ಸೆಕ್ರೇಟ್ರಿಯೇಟ್. ಜನರಲ್ ಕಾನ್ಫರೆನ್ಸ್, ಯುನೆಸ್ಕೊ ಆಡಳಿತ ಮಂಡಳಿ ಸದಸ್ಯತ್ವಕ್ಕೆ ದೇಶಗಳನ್ನು ಚುನಾಯಿಸುತ್ತದೆ. ಭಾರತ ಈ ಸಂಸ್ಥೆಗೆ ಪುನರಾಯ್ಕೆಯಾದ ಬಳಿಕ ಕೇಂದ್ರ ಸಂಸ್ಕೃತಿ ಖಾತೆ ಸಚಿವೆ ಮೀನಾಕ್ಷಿ ಲೇಖಿ, ಭಾರತದ ಉಮೇದುವಾರಿಕೆಯನ್ನು ಬೆಂಬಲಿಸಿದ ಎಲ್ಲ ದೇಶಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಯಲ್ಲಿ ೫೮ ಸದಸ್ಯ ದೇಶಗಳಿದ್ದು, ಪ್ರತೀ ದೇಶಗಳು ನಾಲ್ಕು ವರ್ಷಗಳ ಅಧಿಕಾರಾವಧಿ ಹೊಂದಿವೆ.