ಯುದ್ಧ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು:ಜ:06: ಮೈಸೂರಿನಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಪ್ರಸ್ತಾವನೆ ವಿಳಂಬ ವಿರೋಧಿಸಿ ಜಿಲ್ಲಾಡಳಿತದ ವಿರುದ್ಧ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ದೇಶದ ರಕ್ಷಣೆಗೆ ಸದಾ ತಮ್ಮ ಜೀವದ ಹಂಗನ್ನು ತೊರೆದು ಸಂಸಾರ, ಮನೆ, ಮಠವನ್ನು ಬಿಟ್ಟು ದೇಶದ ಗಡಿಯಲ್ಲಿ ರಾಷ್ಟ್ರವನ್ನು ಕಾಯುತ್ತಿರುವ ನಮ್ಮ ಭಾರತೀಯ ಸೈನಿಕರ ಕಾರ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ದೇಶದ ನಾಗರಿಕರು ನೆಮ್ಮದಿಯಿಂದ ಇರಬೇಕಾದರೆ ನಮ್ಮ ಸೈನಿಕರ ನಿಸ್ವಾರ್ಥ ಸೇವೆಯನ್ನು ರಾಷ್ಟ್ರದ ಪ್ರತಿಯೊಬ್ಬ ಭಾರತೀಯರೂ ಸ್ಮರಿಸಬೇಕು.
ಅದರಲ್ಲೂ ಮೈಸೂರಿನ ಇತಿಹಾಸವನ್ನು ಒಮ್ಮೆ ನೆನಪಿಸಿಕೊಂಡರೆ ಭಾರತೀಯ ಸೇನೆಗೆ ತನ್ನದೇ ಆದಂತಹ ಕೊಡುಗೆಯನ್ನು ಕೊಟ್ಟಿರುವುದು ಅದರಲ್ಲೂ ಯೋಧರ ನಾಡು ಎಂದು ಖ್ಯಾತಿಯಾಗಿರುವ ಮಡಿಕೇರಿ ವೀರಸೇನಾನಿ ಜನರಲ್ ಕಾರ್ಯಪ್ಪ ಪ್ರತಿಯೊಬ್ಬ ಕನ್ನಡಿಗನಲ್ಲಿ ಆತ್ಮಸ್ಥೈರ್ಯ ಹಾಗೂ ದೇಶಾಭಿಮಾನವನ್ನು ಮೂಡಿಸಿದ್ದಾರೆ. ಇಂತಹ ಇತಿಹಾಸವಿರುವ ಮೈಸೂರಿನಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ 20ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿದರೂ ಇನ್ನೂ ಮೀನಮೇಷ ತೋರುತ್ತಿರುವುದನ್ನು ನೋಡಿದರೆ ಸೇನೆಗೆ ಅಗೌರವ ತೋರಿದಂತಾಗುತ್ತದೆ.
ಯಾವುದಾದರೂ ರಾಜಕಾರಣಿ ಅಥವಾ ಕಲಾವಿದ ಮೃತರಾದರೆ ಪ್ರತಿಮೆ ಸ್ಥಾಪನೆಗೆ ಆಸಕ್ತಿ ತೋರುವ ಜಿಲ್ಲಾಡಳಿತಕ್ಕೆ ಸೈನಿಕರ ಬಲಿದಾನ ಗೋಚರವಾಗಲಿಲ್ಲವೇ? ಮೈಸೂರು ಜಿಲ್ಲಾಡಳಿತ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಇದನ್ನು ತನ್ನ ಕರ್ತವ್ಯ ಹಾಗೂ ಜವಾಬ್ದಾರಿ ಎಂದರಿತು ಹುತಾತ್ಮರಾದ ವೀರ ಸೇನಾನಿಗಳಿಗೆ ನಗರದ ಸೂಕ್ತವಾದ ಸ್ಥಳದಲ್ಲಿ ಯುದ್ಧ ಸ್ಮಾರಕವನ್ನು ನಿರ್ಮಾಣ ಮಾಡುವ ಮೂಲಕ ದೇಶಾಭಿಮಾನ ಹಾಗೂ ರಾಷ್ಟ್ರಭಕ್ತಿ ನಿಷ್ಠೆಯನ್ನು ತೋರಿಸಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರುಗಳಾದ ನಾಲಾಬೀದಿ ರವಿ,ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗೋಪಿ, ಅರವಿಂದ, ಬೀಡಾಬಾಬು, ಪರಿಸರ ಚಂದ್ರು, ಕಾವೇರಿಮ್ಮ, ಮಹದೇವಸ್ವಾಮಿ, ಸುನೀಲ್, ಸ್ವಾಮಿಗೈಡ, ಪುಷ್ಪಲತಾ, ಮಾದಪ್ಪ, ಮೋದಿ, ಗಿರೀಶ್, ಮದನ್ ಮತ್ತಿತರರು ಭಾಗವಹಿಸಿದ್ದರು.