ಯುದ್ಧ ತಡೆಗಟ್ಟೋಣ, ಶಾಂತಿ ಹರಡೋಣ ಹಾಗೂ ಮಾನವೀಯ ಮೌಲ್ಯ ಬೆಳೆಸೋಣ : ಡಾ. ರಾಜಶೇಖರ ಬೆನಕನಹಳ್ಳಿ

(ಸಂಜೆವಾಣಿ ವಾರ್ತೆ)
ವಿಜಯಪುರ :ಆ.13: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ದಿನಾಂಕ 12-08-2023ರಂದು ‘ಜಿನೇವಾ ಒಪ್ಪಂದ ದಿನಾಚರಣೆ’ ಆಚರಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ. ರಾಜಶೇಖರ ಬೆನಕನಹಳ್ಳಿ ಮಾತನಾಡಿ, ಯುದ್ಧದ ಸಂದರ್ಭದಲ್ಲಿ ಯುದ್ಧ ಖೈದಿಗಳ ಚಿಕಿತ್ಸೆ, ಆರೈಕೆ, ಶೂಶ್ರುಷೆ, ರಕ್ತದಾನ ಹಾಗೂ ಇನ್ನಿತರ ಕಾರ್ಯಗಳನ್ನು ನಿರ್ವಹಿಸುತ್ತ ಬಂದಿರುವ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಾವೆಲ್ಲರೂ ಯುದ್ಧ ತಡೆಗಟ್ಟೋಣ, ಶಾಂತಿ ಹರಡೋಣ ಹಾಗೂ ಜನತೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಇತಿಹಾಸ ಪ್ರಾಧ್ಯಾಪಕರಾದ ಪ್ರೊ. ಉಮೇಶ ಹಿರೇಮಠ ‘ಜಿನೇವಾ ಒಪ್ಪಂದ ದಿನಾಚರಣೆ’ ಕುರಿತು ಉಪನ್ಯಾಸ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕ್ರಾಸ್ ಸಂಸ್ಥೆಯನ್ನು ಹೆನ್ರಿ ಡುರೆಂಟ್ ಹುಟ್ಟು ಹಾಕಿದರು. ರೆಡ್ ಕ್ರಾಸ್ ಸಂಸ್ಥೆಯ ಉಗಮ ಹಾಗೂ ಕಾರ್ಯನಿರ್ವಹಣೆಯಲ್ಲಿ ‘ಜಿನೇವಾ ಒಡಂಬಡಿಕೆಗಳು’ ಬಹುಮುಖ್ಯವಾದ ಪಾತ್ರ ವಹಿಸಿವೆ ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ. ಎಮ್.ಆರ್. ಜೋಶಿ, ಪ್ರೊ. ರಮೇಶ ಬಳ್ಳೊಳ್ಳಿ, ಡಾ. ಸಣ್ಣಪಾಲ, ಪ್ರೊ. ರಮೇಶ ಕುಮಟಗಿ, ಪ್ರೊ. ನಾತುರಾಮ ಜಾಧವ, ಪ್ರೊ. ಮುಸ್ತಾಕಅಹ್ಮದ ಇನಾಮದಾರ, ಪ್ರೊ. ಮಂಜುನಾಥ ಗಾಣಿಗೇರ, ಪ್ರೊ. ನೂರಅಹ್ಮದ ನಿಡಗುಂದಿ ಹಾಗೂ ಇತರ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಚಿದಾನಂದ ಎಸ್. ಆನೂರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ರಮೇಶ ಕುಮಟಗಿ ವಂದಿಸಿದರು.