ಯುದ್ಧಕ್ಕೆ ಬುದ್ಧ ಮಾರ್ಗದಿಂದ ಕೊನೆ: ಮೆಂಗನ್

ವಾಡಿ:ನ.3: ಜಾತಿ, ತಾರತಮ್ಯದ ಮೇಲೆ ನಡೆಯುತ್ತಿರುವ ರಾಕ್ಷಸ ಯುದ್ದದಂತಹ ಕೃತ್ಯಗಳಿಗೆ ಬುದ್ಧನ ಶಾಂತಿ ಮಾರ್ಗದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ್ ಮೆಂಗನ್ ಹೇಳಿದರು.

ಪಟ್ಟಣ ಸಮೀಪದ ಐತಿಹಾಸಿಕ ಬೌದ್ದ ಕ್ಷೇತ್ರ ಸನ್ನತ್ತಿ (ಕನಗನಹಳ್ಳಿ) ಬುದ್ಧ ವಿಹಾರದಲ್ಲಿ ಪೂರ್ಣಿಮೆ ನಿಮಿತ್ಯ ತಾಲೂಕು ಬೌದ್ಧ ಉಪಾಸಕರ ಬಳಗದ ವತಿಯಿಂದ ಆಯೋಜಿಸಲಾದ ಬುದ್ಧ ವಂದನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ, ಹಿಂದೆ ಸನ್ನತ್ತಿಯು ಸಾಮ್ರಾಟ್ ಅಶೋಕನ ದಕ್ಷಿಣ ರಾಜಧಾನಿಯಾಗಿದ್ದಕ್ಕೆ ಐತಿಹಾಸಿಕ ಪುರಾವೆಗಳಿವೆ. ಇದು ಅಂತರ್ರಾಷ್ಟ್ರೀಯ ಪ್ರವಾಸಿ ತಾಣವಾಗಬೇಕಿತ್ತು. ಆದರೆ, ಸರ್ಕಾರ ನಿರ್ಲಕ್ಷತನದಿಂದ ಹಾಳು ಕೊಂಪೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೌದ್ಧ ಉಪಾಸಕ ಸಾಬಣ್ಣ ಬನ್ನಟ್ಟಿ ಮಾತನಾಡಿ, ನಾವು ಬುದ್ಧರನ್ನು ಮರೆತಿರುವ ಕಾರಣಕ್ಕೆ ಪ್ರಜ್ಞೆ, ಶೀಲ, ಕರುಣೆ, ಪ್ರೀತಿ ಹಾಗೂ ಮೈತ್ರಿಯಿಂದ ವಿಮುಖರಾಗಿದ್ದೇವೆ. ಹಾಗಾಗಿ, ಜಾತಿ, ಧರ್ಮ, ಲಿಂಗ ಹಾಗೂ ವರ್ಗಗಳ ನಡುವೆ ಆಂತರಿಕ ಯುದ್ಧ ಆರಂಭವಾಗಿದೆ ಎಂದು ಹೇಳಿದರು.

ದಸಂಸ ಜಿಲ್ಲಾ ಸಂ.ಸಂಚಾಲಕ ಶ್ರಾವಶಕುಮಾರ ಮೋಸಲಗಿ, ಭರತ ಧನ್ನ, ಕಸಾಪ ವಾಡಿ ವಲಯ ಅಧ್ಯಕ್ಷ ಖೇಮಲಿಂಗ ಬೇಳಮಗಿ, ಸಿದ್ರಾಮ ಉದಯಕರ್, ಅಲ್ಲಮ ಪ್ರಭು ಮುಸ್ಕಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಭಾಗಪ್ಪ ಕೊಲ್ಲೂರ, ಭೀಮಾಶಂಕರ ತೇಲ್ಕರ್, ಅಜಯಕುಮಾರ ದೊಡ್ಡಮನಿ, ಶ್ರೀಕಾಂತ ಬಿರಾಳ, ರಾಜಪ್ಪ ಹುಳಂಡಗೇರಾ, ಮಹಾರುದ್ರಪ್ಪ ಬೆನ್ನೂರಕರ್, ರಾಯಪ್ಪ ಯಾದಗಿರಿ, ಬಸವರಾಜ್ ಯಾದಗಿರಿ, ನಾಗಪ್ಪ ಬಂದಳ್ಳಿ, ಅಯ್ಯಪ್ಪ ಪ್ಯಾಟಿ, ನಾಗಪ್ಪ ಪೂಜಾರಿ, ಮೋನಪ್ಪ ಹೊಸಮನಿ, ನರಸಿಂಗ ಸೇರಿದಂತೆ ಇತರರು ಇದ್ದರು