ಯುದ್ದದ ಅನುಭವ ಹಂಚಿಕೊಂಡಕಾರ್ಗಿಲ್ ಯೋಧ ನವೀನ್ ನಾಗಪ್ಪ

ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೨೬; ನಮ್ಮ ಯೋಧರ ಪರಿಶ್ರಮ ಹಾಗೂ ಛಲವೇ ಕಾರ್ಗಿಲ್ ಯುದ್ದದಲ್ಲಿ ಗೆಲುವಿಗೆ ಕಾರಣವಾಯಿತು ಎಂದುಬೆಂಗಳೂರಿನ ಕೇಂದ್ರ ರಕ್ಷಣಾ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಮತ್ತು ಸೇನೆಯ ಶೌರ್ಯ ಪದಕ ಪುರಸ್ಕೃತ ಕ್ಯಾಪ್ಟನ್ ನವೀನ್ ನಾಗಪ್ಪ ಅಣಬೇರು ತಮ್ಮ ಅನುಭವಗಳನ್ನು‌ ವಿದ್ಯಾರ್ಥಿಗಳ ಮುಂದೆ ಬಿಚ್ವಿಟ್ಟರು.ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಎಸ್.ಎಸ್ ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತೀಯ ಸೇನೆ ಸೇರಬೇಕೆಂಬ ಮಹತ್ತರ ಅಭಿಲಾಷೆಯಿಂದ ಸ ರ್ವೀಸ್ ಸೆಲೆಕ್ಷನ್ ಬೋರ್ಡ್ ಗೆ ಅರ್ಜಿ ಸಲ್ಲಿಸಿ ಕೊನೆಗೂ ಆಯ್ಕೆಯಾದೆ.ಜಮ್ಮು ಮತ್ತು ಕಾಶ್ಮೀರ ೧೩ ನೇ ಬಟಾಲಿಯನ್ ನ ಸೋಪುರ್ ಯುನಿಟ್ ಗೆ ನಾನು ಸೇರ್ಪಡೆಯಾದ ವೇಳೆ ಕಾರ್ಗಿಲ್ ಯುದ್ದ ಆರಂಭವಾಗಿತ್ತು.ನಾನು ದೇಶದ ಗಡಿಭಾಗಕ್ಕೆ ತೆರಳಬೇಕಾಗಿತ್ತು.ಈ ವೇಳೆ ಪಾಯಿಂಟ್ ೫೧೪೦ ಬೆಟ್ಟದಲ್ಲಿ ಶತ್ರುಗಳನ್ನು ನಾಶ ಮಾಡುವ ಗುರಿ ನಮ್ಮದು ಹಾಗೂ ಶತ್ರುಗಳನ್ನು ಸದೆಬಡಿದು ಭಾರತದ ಧ್ವಜ ಹಾರಿಸಿದ್ದೆವು.ಬಳಿಕ ಪಾಯಿಂಟ್ ೪೮೭೫ ಎಂಬ ಭಾಗದಲ್ಲಿ ದಾಳಿ ಮಾಡಬೇಕಿತ್ತು.ಈ ವೇಳೆ ನಮ್ಮ ತಂಡದೊಂದಿಗೆ ಮುನ್ನುಗ್ಗಿ ದಾಳಿ ಮಾಡಿದ್ದೆವು.ಈ ವೇಳೆ ಗ್ರೇನೆಡ್ ದಾಳಿಯಿಂದ ಕಾಲಿಗೆ ಪೆಟ್ಟಾಗಿತ್ತು.ಆದರೆ ನಮಗೆ ಗೆಲುವಿನ ತುಡಿತವಿತ್ತು.ಕಾಲಿನ ಬಗ್ಗೆ ಚಿಂತಿಸದೆ ಯುದ್ದ ಮಾಡಿದ್ದೆವು ಯುದ್ದದ ಆ ದಿನಗಳನ್ನು ನೆನೆದರೆ ಇಂದಿಗೂ ರೋಮಾಂಚಕವಾಗುತ್ತದೆ ಎಂದು ಯುದ್ದದ ಆ ದಿನಗಳಲ್ಲಿ ಅನುಭವಿಸಿದ ಕ್ಷಣಗಳನ್ನು ತೆರೆದಿಟ್ಟರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಅರವಿಂದ್ ಅಧ್ಯಕ್ಷತೆ ವಹಿಸಿದ್ದರು.  ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಸಂಯೋಜಕರುಗಳಾದ  ಡಾ ಕೆ. ಎಸ್. ಬಸವರಾಜನ್, ಸಂಶೋಧನಾ ಮತ್ತು ಅಭಿವೃದ್ಧಿ ಡೀನ್ ಡಾ.ಎ.ಜಿ.ಶಂಕರಮೂರ್ತಿ ಉಪಸ್ಥಿತರಿದ್ದರು.