ಯುಗಾದಿ ಹಬ್ಬ ಕರಡಕಲ್ ಗ್ರಾಮದಲ್ಲಿ ಬಣ್ಣದಲ್ಲಿ ಮಿಂದೆದ್ದ ಚಿಣ್ಣರು

ಯುಗಾದಿ ಬೇವಿನ ಸಂಭ್ರಮ ಮನೆ ಮನಗಳಲ್ಲಿ
ದುರುಗಪ್ಪ ಹೊಸಮನಿ
ಲಿಂಗಸುಗೂರು,ಮಾ.೨೩- ಪುರಸಭೆ ವ್ಯಾಪ್ತಿಯಲ್ಲಿ ಬರುವ ಕರಡಕಲ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಯುಗಾದಿ ಹಬ್ಬದ ಅಂಗವಾಗಿ ಹೊಕುಳಿ ಹಾಡಿ ಬಣ್ಣದಲ್ಲಿ ಮಿಂದೆದ್ದ ಚಿಣ್ಣರು ಕುಣಿದು ಕುಪ್ಪಳಿಸಿದರು.
ಬಹುತೇಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ವರ್ಷ ಯುಗಾದಿ ಹಬ್ಬವನ್ನು ಗ್ರಾಮೀಣ ಜನರು ಆಚರಿಸುವ ಮೂಲಕ ವಿವಿಧ ರೀತಿಯ ನಾನ ಭಕ್ಷ ಭೋಜನ ಮಾಡಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ಸಡಗರ ಸಂಭ್ರಮದಿಂದ ಯುವಕರು ಮಹಿಳೆಯರು ಚಿಣ್ಣರು ಹೊಸ ವರ್ಷವನ್ನು ಸ್ವಾಗತಿಸುವ ಮೂಲಕ ಸಾಂಪ್ರದಾಯಿಕ ವಾಗಿ ಬರಮಾಡಿ ಕೊಂಡರು.
ವರ ಕವಿ ಅಂಬಿಕಾತನಯದತ್ತರು ಬರೆದಿರುವ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲ್ಲಿ/ ಭೃಂಗದ ಸಂಗೀತ ಕೇಲಿ / ಮತ್ತೆ ಮತ್ತೆ ಕೇಳಿ ಬರುತಿದೆ/ ಬೇವಿನ ಕಹಿ ಬಾಳಿನಲ್ಲಿ/ ಹೂವಿನ ನಸುಗೆಂಪು ಸೂಸಿ/ ಜೀವಕಳೆ ತರುತಿದೆ ಎಂಬ ಕವಿವಾಣಿಯಂತೆ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.
ಯುಗಾದಿ ಬಂತೆಂದರೆ ಸಾಕು ಗ್ರಾಮೀಣ ಜನರು ಯುಗಾದಿ ಬೇವಿನ ಸೇವನೆಯ ಮನೆ ಮನೆಗಳಲ್ಲಿ ಸಂಭ್ರಮ ಒಂದೆಡೆಯಾದರೆ ಅದನ್ನು ಹಂಚುವುದು ಮತ್ತೊಂದು ಕಡೆ ಸಂಭ್ರಮ ಸಡಗರ ಮನೆಮಾಡಿದೆ.
ಬಹುತೇಕವಾಗಿ ಯುಗಾದಿ ಹಬ್ಬಕ್ಕೆ ನೆಂಟರು ಬೀಗರು ಊರಿಗೆ ಬಂದರೆ ಅಂದು ಎಲ್ಲಿಲ್ಲದ ಖುಷಿ ಮನೆಯ ಮಂದಿಗೆ ಹಬ್ಬದ ವಾತಾವರಣ ಹಿಮ್ಮಡಿಗೊಳಿಸುವ ಮೂಲಕ ಹಬ್ಬದ ಕಳೆಯನ್ನು ರೈತರು ಕೃಷಿ ಕೂಲಿಕಾರರು ತಮ್ಮ ತಮ್ಮ ಹೊಲಗಳಲ್ಲಿ ಹೊಲವನ್ನು ಹದ ಮಾಡಿ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.
ಇಂದು ಸಂಪ್ರದಾಯದಂತೆ ಹೊಸ ವರ್ಷದ ಯುಗಾದಿ ಹೊಸ ಮನ್ವಂತರದ ಯುಗಾದಿ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಯುಗಾದಿ ಹಬ್ಬ ಆಚರಣೆ ಮಾಡುವುದು ವಾಡಿಕೆ ಇಂದಿಗೂ ಜನಪ್ರಿಯವಾಗಿದೆ ಎನ್ನುವುದಕ್ಕೆ ಇದು ಬಣ್ಣದ ಹೊಕಳಿ ಸಾಕ್ಷಿಕರಿಸುತ್ತದೆ.
ಯುಗಾದಿ ಸೌಹಾರ್ದತೆ ತೋರುವ ಹಬ್ಬವಾಗಿ ಗ್ರಾಮಗಳಲ್ಲಿ ಕಂಡುಬರುತ್ತದೆ ಹಾಗೂ ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲವನ್ನು ಬಂಧು ಮಿತ್ರರಿಗೆ ಅನ್ನೆಧರ್ಮಗಳ ಬಂಧುಗಳಿಗೆ ವಿತರಣೆ ಮಾಡುವುದನ್ನು ಇಂದಿಗೂ ಜನಪ್ರಿಯವಾಗಿ ಉಳಿದಿದೆ.
ಒಟ್ಟಾರೆಯಾಗಿ ಹೊಸ ವರ್ಷದಲ್ಲಿ ಹಳೆಯ ಗಾಯ ಮಾಯವಾಗಿ ಮರೆಯಾಗಲಿ ಹಾಗೂ ದೈನಂದಿನ ಬದುಕಿನಲ್ಲಿ ಹೊಸ ವರ್ಷ ಹರ್ಷ ತರಲಿ ಎಂದು ನಾಡಿನ ಜನತೆಗೆ ಹಾರೈಸೋಣ.