ಯುಗಪುರುಷ ಶಿವಕುಮಾರ ಶ್ರೀಗಳು

ಸಾಣೇಹಳ್ಳಿ, ಏ.29; ಇಲ್ಲಿನ ಶ್ರೀ ಶಿವಕುಮಾರ ರಥೋತ್ಸವ ಸಮಿತಿ ಅಂತರ್ಜಾಲದಲ್ಲಿ ಆಯೋಜಿಸಿದ್ದ `ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮಿಗಳವರ 107ನೆಯ ಜಯಂತಿ’ ಕುರಿತ ಸಂವಾದದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಂವಾದಕ ಹೆಚ್ ಎಸ್ ದ್ಯಾಮೇಶ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ ಶ್ರೀ ಶಿವಕುಮಾರ ಸ್ವಾಮಿಗಳನ್ನ ನಾವು ಮೊಟ್ಟಮೊದಲು ನೋಡಿದ್ದು ನಾವು 10 ವರ್ಷದ ಬಾಲಕರಾಗಿದ್ದಾಗ. ರಾಣೇಬೆನ್ನೂರು ತಾಲ್ಲೂಕು ಹೆಡಿಯಾಲದಲ್ಲಿನ ನಮ್ಮ ಪೂರ್ವಾಶ್ರಮದಲ್ಲಿ ಶ್ರೀಗಳ ಪೂಜೆ-ಪ್ರಸಾದದ ಏರ್ಪಾಡಾಗಿತ್ತು. ನಮ್ಮದು ಗರಿಗಳಿಂದ ಮಾಡಿದ ಚಪ್ಪರದ ಗುಡಿಸಲು. ಅವರಿಗೆ ಸ್ನಾನ ಮಾಡಲು ಪ್ರತ್ಯೇಕ ವ್ಯವಸ್ಥೆಯೇ ಇರಲಿಲ್ಲ. ಗುಡಿಸಲಿನ ಹೊರಭಾಗದಲ್ಲಿ ಹಳೆಯ ಕಂಬಳಿಗಳಿಂದ ಮರೆಮಾಡಿದ ತಾತ್ಕಾಲಿಕವಾಗಿ ಬಚ್ಚಲಿನಲ್ಲಿಯೇ ಸ್ನಾನ ಮಾಡಿ, ಎಲ್ಲರೆದುರೇ ಪೂಜೆ ನೆರವೇರಿಸಿದ್ದು ಮರೆಯಲಾಗದ ಸಂಗತಿ. ಕೆಲ ವರ್ಷಗಳ ನಂತರ ತಂದೆಯವರು ನಮಗೆ ಜವಾನ ಹುದ್ದೆ ಕೇಳಿ ಬರೆದ ಪತ್ರವೊಂದನ್ನು ತೆಗೆದುಕೊಂಡು ಸಿರಿಗೆರೆಗೆ ಮೊದಲಬಾರಿ ಬಂದೆವು. ಆಗ ತಾತ್ಕಾಲಿಕವಾಗಿ ವಿದ್ಯಾಸಂಸ್ಥೆಯ ಮುಖ್ಯ ಕಛೇರಿಯಲ್ಲಿ ಕಸ ಹೊಡೆಯುವ, ಬಂದವರ ಆತಿಥ್ಯ ಮಾಡುವ ನಂತರ `ಇಂದ, ಗೆ’ ಬರೆದುಕೊಳ್ಳುವ ಕೆಲಸ ನೀಡಿದರು. ನಮ್ಮ ಕೆಲಸ-ಕಾರ್ಯಗಳನ್ನು ನೋಡಿದ ಶ್ರೀಗಳು ಮುಂದೆ ಕಾಲೇಜು ಓದಲು ಎಲ್ಲ ನೆರವನ್ನೂ ನೀಡಿ ಪ್ರೋತ್ಸಾಹಿಸಿದ್ದರ ಫಲವಾಗಿ ಸಿರಿಗೆರೆಯಲ್ಲಿಯೇ ಪಿಯುಸಿ, ಪದವಿ ಮತ್ತು ಮೈಸೂರಿನಲ್ಲಿ ಎಂ ಎಂ ಪದವಿ ಪಡೆಯಲು ಸಾಧ್ಯವಾಯಿತು. ಈ ನಡುವೆ ಪಿಯುಸಿ ಫೇಲ್ ಆದಾಗ ಗುರುಗಳು ಕರೆದು ಹೇಳಿದ ಮಾತು ಸದಾ ಸ್ಮರಣೀಯವಾದುದು; “ಅಯ್ಯೋ ದಡ್ಡ, ಎಲ್ಲರೂ ಪಾಸ್ ಆದರೆ ಫೇಲ್ ಆಗೋರು ಯಾರು? ಫೇಲ್ ಆಗೋದೆ ಪಾಸಾಗೋಕೆ. ಮತ್ತೆ ಕಟ್ಟು ಮತ್ತೆ ಬರೆ”. ಲೌಕಿಕವಾಗಿ ತಂದೆ, ತಾಯಿ, ಬಂಧು-ಬಳಗ ಬೇರೆ-ಬೇರೆ. ಪಾರಮಾರ್ಥಿಕವಾಗಿ ಶಿವಕುಮಾರ ಶ್ರೀಗಳೇ ನಮಗೆ ಎಲ್ಲವೂ ಆಗಿದ್ದರು. ಇದು ಕೇವಲ ನಮಗೊಬ್ಬರಿಗೆ ಆದ ಅನುಭವವಲ್ಲ; ನಮ್ಮಂತಹ ಸಹಸ್ರಾರು ಜನರಿಗಾದ ಅನುಭವ. ಶಿವಕುಮಾರ ಶ್ರೀಗಳವರ ಬದುಕಿನಲ್ಲಿ ಕಾಲ, ಕಾಸು, ಕಾಯಕಕ್ಕೆ ಎಲ್ಲಿಲ್ಲದ ಮಹತ್ವವಿತ್ತು. ಇವುಗಳಲ್ಲಿ ಒಂದಿಷ್ಟು ಏರುಪೇರಾದರೂ ಸಹಿಸುತ್ತಿರಲಿಲ್ಲ. ಈ ಬಗೆಗೆ ಅನೇಕರಿಗೆ ಪ್ರೋತ್ಸಾಹಿಸಿ, ಕೆಲವೊಮ್ಮೆ ಗದರಿಸಿ ಬೈದು ಬುದ್ದಿ ಹೇಳುತ್ತಿದ್ದರು. ವಿದ್ಯಾಸಂಸ್ಥೆಯ ನೌಕರರ ಬಗೆಗೆ ಅವರಿಗೆ ಅಪಾರ ಅಭಿಮಾನವಿತ್ತು. ಸಂಸ್ಥೆಯನ್ನು ಸ್ಥಾಪಿಸಿದವರು ನಾವಾದರೂ ಅದನ್ನು ಬೆಳೆಸಿದವರು ನೌಕರರು ಎಂದು ಹೇಳಿಕೊಳ್ಳುತ್ತಿದ್ದರು. ಮಠದ ನಿಜವಾದ ಆಸ್ತಿ ಭಕ್ತರು, ಅನುಯಾಯಿಗಳೇ ಹೊರತು; ಧನ, ಕನಕಗಳಲ್ಲ ಎನ್ನುತ್ತಿದ್ದರು. ಪೂಜ್ಯರು ಪೀಠವೆಂದೂ ಶಾಶ್ವತವಲ್ಲ. ಅದೊಂದು ಸೇವೆಗೆ ಸಾಧನ ಮಾತ್ರ ಎಂದು ಪರಿಭಾವಿಸಿ ಅದರಂತೆ ನಡೆದುಕೊಂಡವರು. ಶ್ರೀಗಳ ಒಂದೊಂದು ಮಾತು ಮಾಣಿಕ್ಯ. ಅಧ್ಯಾಪಕ ಹೆಚ್ ಎಸ್ ದ್ಯಾಮೇಶ್ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾಸಂಘದ ಹೆಚ್ ಎಸ್ ನಾಗರಾಜ್, ಸಾಹಿತ್ಯ ರಮೇಶ್, ಸುಪ್ರಭೆ ಡಿ ಎಸ್, ಮುಕ್ತಾ ಡಿ ಜೆ ಹಾಗೂ ತಬಲ ಸಾಥಿ ಶರಣ್ ಕುಮಾರ್ ಮಹದೇವ ಬಣಕಾರರು ಶ್ರೀ ಶಿವಕುಮಾರ ಶ್ರೀಗಳನ್ನು ಕುರಿತಂತೆ ರಚಿಸಿರುವ ವಚನಗಳನ್ನು ಹಾಡಿದರು. ಆನ್‌ಲೈನ್‌ನಲ್ಲಿ ಭಿತ್ತರವಾದ ಈ ಕಾರ್ಯಕ್ರಮವನ್ನು ಸಾವಿರಾರು ಜನ ವೀಕ್ಷಿಸಿ, ಪ್ರತಿಕ್ರಿಯಿಸಿದರು.