ಯುಕೆಯಿಂದ ಬೆಂಗಳೂರಿಗೆ ಬಂದವರಲ್ಲಿ ಹೆಚ್ಚದ ಸೋಂಕು:ಗೌರವ್ ಗುಪ್ತ

ಬೆಂಗಳೂರು, ಡಿ.30-ಯುಕೆಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರ ಪೈಕಿ 18 ಮಂದಿಗೆ ಕೊವೀಡ್ ದೃಢಪಟ್ಟಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಹೇಳಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರೂಪಾಂತರ ಕೊರೋನಾ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ನಗರದಲ್ಲಿ ನಿನ್ನೆ 17 ಪ್ರಕರಣ ಹಾಗೂ ಇಂದು 1 ಸೇರಿ 18 ಮಂದಿಗೆ ಸೋಂಕು ದೃಢಪಟ್ಟಿದ್ದು, 54 ಪ್ರಾಥಮಿಕ ಸಂಪರ್ಕಿತರು ಹಾಗೂ 92 ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದಾರೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪಾಲಿಕೆ ವತಿಯಿಂದ ಗುರುತಿಸಿರುವ ಹೋಟೆಲ್, ರೆಸಿಡೆನ್ಸಿಗಳಲ್ಲಿ ಸಾಂಸ್ಥಿಕ ಗೃಹದಿಗ್ಬಂಧನದಲ್ಲಿರಿಸಲಾಗಿದೆ.

ಇನ್ನು, ಬೊಮ್ಮನಹಳ್ಳಿ ವಲಯದ ಅಪಾರ್ಟ್ ಮೆಂಟ್ ನಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಅಪಾರ್ಟ್ ಮೆಂಟ್ ನಲ್ಲಿಯೇ 33 ಮಂದಿಯನ್ನು ಸಾಂಸ್ಥಿಕ ಗೃಹದಿಗ್ಬಂಧನದಲ್ಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೂಪಾಂತರ ಕೊರೋನಾ ಅತ್ಯಂತ ವೇಗವಾಗಿ ಹರಡುವ ಸೋಂಕಾಗಿದ್ದು, ಹೆಚ್ಚು ಮಂದಿಗೆ ಸೋಂಕು ತಗಲುವ ಸಾಧ್ಯತೆ ಇದೆ. ಈ ಸಂಬಂಧ ಯಾರು ಅವರ ಸಂಪರ್ಕದಲ್ಲಿದ್ದರು ಎಂಬುದನ್ನು ತ್ವರಿತವಾಗಿ ಪತ್ತೆ ಮಾಡಿ ಕೂಡಲೇ ಪರೀಕ್ಷೆಗೊಳಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ನಗರದಲ್ಲಿ ರೂಪಾಂತರ ಕೊರೋನಾ ಯಾವ ವಲಯದಲ್ಲಿ ಎಷ್ಟು ಪ್ರಕರಣಗಳು ಕಂಡುಬಂದಿವೆ ಎಂದು ಮಾಹಿತಿ ಪಡೆದ ಆಡಳಿತಗಾರರು, ಸರ್ಕಾರದ ಎಸ್.ಒ.ಪಿ ಪ್ರಕಾರ ನಿಯಮಗಳನ್ನು ಪಾಲನೆ ಮಾಡಿ ಸರಿಯಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಆರೋಗ್ಯ ವಿಭಾಗದ ವಿಶೇ ಆಯುಕ್ತ ರಾಜೇಂದ್ರ ಚೋಳನ್, ಎಲ್ಲಾ ವಲಯ ಜಂಟಿ ಆಯುಕ್ತರಾದ ಪಲ್ಲವಿ, ಅಶೋಕ್, ವೀರಭದ್ರ ಸ್ವಾಮಿ, ರಾಮಕೃಷ್ಣ, ಶಿವಸ್ವಾಮಿ, ವೆಂಕಟಾಚಲಪತಿ, ನರಸಿಂಹಮೂರ್ತಿ, ಮುಖ್ಯ ಆರೋಗ್ಯಾಧಿಕಾರಿ(ಆರೋಗ್ಯ) ಡಾ. ವಿಜೇಂದ್ರ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.