ಯುಕೆಪಿ 3ನೇ ಹಂತದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಧನ ವಿತರಿಸುವ ಮೂಲಕ ರೈತರಿಗೆ ನ್ಯಾಯ :ಮುಖ್ಯಮಂತ್ರಿ ಬೊಮ್ಮಾಯಿ

ವಿಜಯಪುರ:ಮಾ.10: ವಿವಿಧ ನೀರಾವರಿ ಯೋಜನೆಗಳಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಒಣ ಬೇಸಾಯಕ್ಕೆ 2 ಲಕ್ಷದಿಂದ ಗರಿಷ್ಟ 20 ಲಕ್ಷ ರೂ. ನೀರಾವರಿ ಪ್ರದೇಶಕ್ಕೆ 24 ಲಕ್ಷ ರೂ ವರೆಗೆ ಪರಿಹಾರ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಜಲಸಂಪನ್ಮೂಲ ಇಲಾಖೆ ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತದ ಸಹಯೋಗದಲ್ಲಿ ಗುರುವಾರ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದ ಕೃಷ್ಣಾ ನಗರದ ಬಿ.ಟಿ. ಪಾಟೀಲ ಮೆಮೋರಿಯಲ್ ನಂದಿ ಇಂಟರ್‍ನ್ಯಾಷನಲ್, ಸಿ.ಬಿ.ಎಸ್.ಇ. ಸ್ಕೂಲ್, ಆವರಣದಲ್ಲಿ ಹಮ್ಮಿಕೊಂಡ, 3 ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡಂತಹ ರೈತರಿಗೆ ಪರಿಹಾರ ವಿತರಿಸಿ ಅವರು ಮಾತನಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಜಮೀನು ಮನೆ ಕಳೆದುಕೊಂಡಿರುವವರಿಗೆ ಪರಿಹಾರದ ದರವನ್ನು ಏಕಸ್ವರೂಪಗೊಳಿಸಿ, ಪರಿಹಾರದ ತಾರತಮ್ಯವನ್ನು ಸರಿಪಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಒಣ ಬೇಸಾಯಕ್ಕೆ 2 ಲಕ್ಷದಿಂದ ಗರಿಷ್ಟ 20 ಲಕ್ಷ ರೂ. ನೀರಾವರಿ ಪ್ರದೇಶಕ್ಕೆ 24 ಲಕ್ಷ ರೂ ವರೆಗೆ ಪರಿಹಾರ ನೀಡಲಾಗುತ್ತಿದೆ. ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. ಭೂಸ್ವಾಧೀನಕ್ಕೆ ಜಮೀನು ಮನೆ ಕೊಡಲು ಇಚ್ಛಿಸದವರು ಭೂ ಸ್ವಾಧೀನದ ವಿರುದ್ಧ ನ್ಯಾಯಾಯಲಯಕ್ಕೆ ಹೋಗುವ ಅವಕಾಶದ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆಯಲಾಗುವುದು. ಆರ್ ಎಂಡ್ ಆರ್ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಮುಳವಾಡ, ಚಿಮ್ಮಲಗಿ ಏತ ನೀರಾವರಿ ಪ್ರದೇಶದಲ್ಲಿ 15 ಲಕ್ಷ ಎಕರೆ ಜಮೀನಿಗೆ ನೀರು ಒದಗಿಸಲಾಗುವುದು. ರೇವಣಸಿದ್ಧೇಶ್ವರ ಏತನೀರಾವರಿಗೆ ಅಡಿಗಲ್ಲು ಹಾಕಲಾಗಿದೆ ಎಂದು ತಿಳಿಸಿದರು.
ಪುನರ್ವಸತಿ ಮತ್ತು ಪುನನಿರ್ಮಾಣಕ್ಕೆ ಸಂಬಂಧಿಸಿದಂತೆ, ಯೋಜನೆಗಳಿಗೆ ಜಮೀನು ಕಳೆದುಕೊಳ್ಳುವ ರೈತರ ಬದುಕು ಉತ್ತಮವಾಗಿ ರೂಪುಗೊಳ್ಳಬೇಕೆಂಬುದು ನಮ್ಮ ನೀತಿ. ಪುರ್ನವಸತಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯ, ಶಾಲೆ , ರಸ್ತೆಗಳಿಲ್ಲ ಎಂದು ಹಲವು ದೂರಗಳು ಬರುತ್ತಿವೆ. ಮನೆ ಕಳೆದುಕೊಳ್ಳುವವರಿಗೆ ಮನೆಯ ಪ್ರಸ್ತುತ ಬೆಲೆಯ ಜೊತೆಗೆ ಶೇ.20 ರಷ್ಟು ಪರಿಹಾರವನ್ನು ನೀಡುವ ಹೊಸ ಚಿಂತನೆಯನ್ನು ಮಾಡಲಾಗಿದೆ. ಪುನರ್ವಸತಿ ಮತ್ತು ಪುನನಿರ್ಮಾಣ ಕೇಂದ್ರಗಳಲ್ಲಿ ನಷ್ಟ ಅನುಭವಿಸಿದವರಿಗೆ ಜಮೀನು ನೀಡುವುದರ ಜೊತೆಗೆ ಮನೆಯನ್ನು ನಿರ್ಮಿಸಿಕೊಡುವ ವಿಶೇಷ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು.
ನಾಲ್ಕೈದು ಹಳ್ಳಿಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಅಕ್ಕಪಕ್ಕದಲ್ಲಿಯೇ ನಿರ್ಮಿಸಿ, ಜನರಿಗೆ ಸಾಮಾನ್ಯ ವ್ಯವಸ್ಥೆಗಳನ್ನು ನೀಡುವ ಜೊತೆಗೆ ಶಾಲಾ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳನ್ನೂ ನಿರ್ಮಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಕೃಷ್ಣೆಯ ತೀರದ ರೈತರು, ನದಿಯ ನೀರನ್ನು ಬಳಸುವ ವ್ಯವಸ್ಥೆ ಇರಲಿಲ್ಲ. ಇಲ್ಲಿನ ರೈತರ ಪ್ರಾಮಾಣಿಕರು ಮತ್ತು ಕಾಯಕನಿಷ್ಠೆಯುಳ್ಳವರು. ಕೃಷ್ಣೆಯ ನೀರು ಹಾಗೂ ಮಣ್ಣು ನಿಸರ್ಗ ಕೊಟ್ಟಿರುವ ವರವಾಗಿದ್ದು, ಗುಣಮಟ್ಟದ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟೆಗಳಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಬೆಳೆಯಲಾಗುತ್ತಿದೆ. ಪ್ರಸ್ತುತ ನಮ್ಮ ಸರ್ಕಾರ ರಾಜ್ಯದಲ್ಲಿ ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ,. ನೀರಾವರಿ ಯೋಜನೆಗಳನ್ನೂ ಪೂರ್ಣಗೊಳಿಸಿ ಈ ಭಾಗದ ರೈತರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ರೈತರು, ಜನಸಾಮಾನ್ಯರು ತಮ್ಮ ಸ್ವಂತ ಮನೆ-ಭೂಮಿ ಕಳೆದುಕೊಂಡವರ ಬದುಕು ಹಸನಾಗಲಿ ಎಂಬ ಹಿತದೃಷ್ಟಿಯಿಂದ ನೀರಾವರಿಯಿಂದ ಲಾಭ ಪಡೆದ ರೈತರು ಉತ್ತಮವಾಗಿರುವಂತೆ, ಜಮೀನು ಕಳೆದುಕೊಂಡವರೂ ಸಹ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಬೇಕು ಎಂಬ ಆಶಯ ಹೊಂದಿದೆ ಎಂದುರು.
ಜಲ ಸಂಪನ್ಮೂಲ ಸಚಿವರು, ಹಾಗೂ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವರು ಗೋವಿಂದ ಕಾರಜೋಳ ಅವರು ಮಾತನಾಡಿ, ನಮ್ಮ ನಾಡಿನ ಜನ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದವರು. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳಗಡೆಯಾದ ಸಂದರ್ಭದಲ್ಲಿ ಜನರ ಪರಿಸ್ಥಿತಿ ಕಂಡಿದ್ದೇವೆ. ಪರಿಹಾರ ರೂಪವಾಗಿ ಒಣ ಬೇಸಾಯದವರಿಗೆ 20 ಲಕ್ಷ, ನೀರಾವರಿಯವರಿಗೆ 24 ಲಕ್ಷ ರೂ ನಿಗದಿಗೊಳಿಸಿದ್ದು, ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಇಂದಿನ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪರಿಹಾರ ನೀಡಲಾಗುತ್ತಿದ್ದು, ನಾಳೆಯಿಂದ ಪರಿಹಾರ ವಿತರಣೆ ಆರಂಭಗೊಳ್ಳಲಿದ್ದು, ಪರಿಹಾರ ಧನದ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಿರ್ವಹಣೆಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಬಲೇಶ್ವರ ಶಾಸಕ ಡಾ.ಎಂ.ಬಿ.ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ, ಸಂಸದರಾದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ತಿನ ಶಾಸಕ ಹಣಮಂತ ನಿರಾಣಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಎಸ್.ಪಾಟೀಲ, ಮಾಜಿ ಸಚಿವ ಎಸ್. ಕೆ.ಬೆಳ್ಳುಬ್ಬಿ ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಹಾಗೂ ಪುನರ್ವಸತಿ ಮತ್ತು ಪುನರ್‍ನಿರ್ಮಾಣ ಮಹಾ ವ್ಯವಸ್ಥಾಪಕರಾದ ಭಂವರ್ ಸಿಂಗ್ ಮೀನಾ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದಕುಮಾರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಂಡಪ್ಪ, ಶಿವಾನಂದ ರಾಮಪ್ಪ ನಿಡೋಣಿ. ಶ್ರೀಶೈಲ ರಾಮಪ್ಪ ಮಾದರ, ಹಣಮಂತ ರಾಮಪ್ಪ ಗಡ್ಡಿ, ರಾಮಪ್ಪ ಭೀಮಪ್ಪ ನೀಲಣ್ಣವರ, ಸುನಂದಾ ಗೋವಿಂದಪ್ಪ ಬೂದಿಹಾಳ ಮತ್ತಿತರರಿಗೆ ಪರಿಹಾರದ ಚೆಕ್ ವಿತರಿಸಿದರು.