ಯುಕೆಪಿ ಯೋಜನೆ ಜಾರಿಗೆ ಆಗ್ರಹ

ಬೆಂಗಳೂರು, ಸೆ. ೧೫- ಉತ್ತರ ಕರ್ನಾಟಕದ ೭ ಜಿಲ್ಲೆಗಳ ೧೫ ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ ೩ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರ ಭಿಕ್ಷೆ, ಸಾಲ ಅಥವಾ ಕಳ್ಳತನ ಮಾಡಿಯಾದರೂ ದುಡ್ಡು ತಂದು ಯೋಜನೆ ಪೂರ್ಣಗೊಳಿಸಿ. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಬಿಡಬೇಡಿ ಎಂದು ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ವಿಧಾನ ಪರಿಷತ್ತಿನಲ್ಲಿಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಈ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳದಿದ್ದರೆ ಉಪವಾಸ, ಆ ಬಳಿಕ ಆಮರಣಾಂತ ಉಪವಾಸ ಕೈಗೊಳ್ಳುತ್ತೇವೆ. ಆಗಲೂ ಜಗ್ಗದಿದ್ದರೆ ಮುಂದಿನ ಹಂತಕ್ಕೂ ಹೋಗಲು ಹಿಂಜರಿಯುವುದಿಲ್ಲ. ಭೂಮಿ, ಮನೆ, ಕಟ್ಟಡ ಕಳೆದುಕೊಳ್ಳುವ ಸಂತ್ರಸ್ತರ ನೋವಿಗೆ ಸ್ಪಂದಿಸಿ ಎಂದು ಒತ್ತಾಯಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ೩ನೇ ಹಂತದ ಕಾಮಗಾರಿಯ ವಿಳಂಬ ಕುರಿತು ನಿಯಮ ೬೮ ರಡಿ ವಿಷಯ ಪ್ರಸ್ತಾಪಿಸಿದ ಅವರು, ಅಖಂಡ ಕರ್ನಾಟಕದ ಕನಸು ನನಸು ಮಾಡಬೇಕಾದರೆ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಸರ್ಕಾರ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ತಮಗಿರುವ ಒಂದೂವರೆ ವರ್ಷವನ್ನು ಬಳಸಿ ಯೋಜನೆ ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿ. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಯ ಜತೆಗೆ ಮಹದಾಯಿ, ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ೩ನೇ ಹಂತದ ಕಾಮಗಾರಿ ಪೂರ್ಣಗೊಂಡು ನೀರಾವರಿ ಸೌಲಭ್ಯ ಲಭ್ಯವಾದರೆ ಪ್ರತಿ ವರ್ಷ ಸರಾಸರಿ ೩ ಲಕ್ಷ ೫೬ ಸಾವಿರ ಕೋಟಿಗೂ ವರಮಾನ ರಾಜ್ಯ ಸರ್ಕಾರಕ್ಕೆ ಬರಲಿದೆ. ಜತೆಗೆ ಆ ಭಾಗದ ರೈತರ ಬಹುದಿನಗಳ ಕನಸು ನನಸಾಗಲಿದೆ ಎಂದು ಹೇಳಿದರು.
೧ ಲಕ್ಷ ಕೋಟಿ ಆತಂಕ
ಕೃಷ್ಣಾ ಮೇಲ್ದಂಡೆ ಯೋಜನೆಯ ೩ನೇ ಹಂತದ ಕಾಮಗಾರಿಯನ್ನು ೧೭,೨೦೭ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ. ೨೦೧೭ರಲ್ಲಿ ಪರಿಷ್ಕೃತ ಅಂದಾಜಿನಲ್ಲಿ ೫೧,೧೪೮ ಕೋಟಿ ರೂ. ಆಗಿದೆ. ಈಗ ಅದು ೬೫ ಸಾವಿರ ಕೋಟಿಗೆ ತಲುಪಬಹುದು. ಹೀಗೆ ವಿಳಂಬ ಮಾಡಿದರೆ ಈ ಯೋಜನೆಯ ವೆಚ್ಚ ೧ ಲಕ್ಷ ಕೋಟಿ ದಾಟಿದರೂ ಆಶ್ಚರ್ಯ ಇಲ್ಲ ಎನ್ನುವ ಆತಂಕ ವ್ಯಕ್ತಪಡಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ೧ ಮತ್ತು ೨ನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಲ್ಬುರ್ಗಿ, ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳ ೧೫ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ೩ನೇ ಹಂತದ ಯೋಜನೆ ಪೂರ್ಣಗೊಳಿಸುವುದರಿಂದ ಕಲ್ಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಯ ೧೫ ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ತಡ ಮಾಡದೆ ಯೋಜನೆಯನ್ನು ಕೈಗೆತ್ತಿಕೊಳ್ಳಿ ಎಂದು ಅವರು ಒತ್ತಾಯಿಸಿದರು.
ಈ ಯೋಜನೆಯಿಂದಾಗಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ೪ ಲಕ್ಷ ಎಕರೆ ಭೂಮಿ ಕಳೆದುಕೊಳ್ಳಲಿದ್ದಾರೆ. ಅತಿ ಹೆಚ್ಚು ನಷ್ಟವಾಗುವುದು ಈ ಎರಡು ಜಿಲ್ಲೆಗಳಿಗೆ. ಹೀಗಾಗಿ ಪರಿಹಾರ ಮೊತ್ತವನ್ನು ಹೆಚ್ಚು ಮಾಡಿ. ಜಮೀನು, ಮನೆ, ಕಟ್ಟಡ ಕಳೆದುಕೊಳ್ಳುವ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರುವುದರಿಂದ ಮನಸ್ಸು ಮಾಡಿದರೆ ಯೋಜನೆಯನ್ನು ಪೂರ್ಣಗೊಳಿಸುವುದು ದೊಡ್ಡ ಕೆಲಸವಲ್ಲ. ಇಚ್ಛಾಶಕ್ತಿ ಪ್ರದರ್ಶಿಸಿ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು.
ಯೋಜನೆಗೆ ಬೇಕಾದ ಹಣವನ್ನು ಹೊಂದಿಸಲು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ, ವಿಶ್ವ ಬ್ಯಾಂಕ್ ಅಥವಾ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದಲಾದರೂ ಹಣ ತನ್ನಿ. ಅದು ಸಾಧ್ಯವಾಗದಿದ್ದರೆ ಭಿಕ್ಷೆ ಬೇಡಿ, ಕಳ್ಳತನ ಮಾಡಿಯಾದರೂ ಯೋಜನೆಯನ್ನು ಪೂರ್ಣಗೊಳಿಸಿ, ಉತ್ತರ ಕರ್ನಾಟಕ ೭ ಜಿಲ್ಲೆಗಳ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಆಡಳಿತ ಇದ್ದ ಸಂದರ್ಭದಲ್ಲಿ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಪ್ರತಿ ಎಕರೆಗೆ ೩೦ ಲಕ್ಷ ಪರಿಹಾರ ನೀಡುವಂತೆ ಬಿಜೆಪಿ ಆಗ್ರಹಿಸಿತ್ತು. ಈಗ ನೀವೇ ಅಧಿಕಾರದಲ್ಲಿರುವುದರಿಂದ ನೀವು ಬೇಡಿಕೆ ಇಟ್ಟ ಹಣಕ್ಕಿಂತ ಹೆಚ್ಚಿನ ಹಣ ನೀಡಿ, ಅದು ಸಾಧ್ಯವಾಗದಿದ್ದರೆ ನೀವು ಹೇಳಿದಷ್ಟಾದರೂ ಪರಿಹಾರ ಕೊಡಿ ಒತ್ತಾಯಿಸಿದರು.