ಯಾಸ್ ರಭಸಕ್ಕೆ ಉರುಳಿದ ಮರಗಳು, ಮನೆಗಳಿಗೆ ಹಾನಿ

ಕೋಲ್ಕತ್ತ, ಮೇ ೨೬- ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಾಸ್’ ಚಂಡಮಾರುತವು ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಸಮೀಪದಲ್ಲಿ ಇಂದು ಬೆಳಿಗ್ಗೆ ಭೂಪ್ರದೇಶಕ್ಕೆ ಅಪ್ಪಳಿಸಿದೆ.
ಬೆಳಿಗ್ಗೆ ಸುಮಾರು ೯.೧೫ಕ್ಕೆ ಬಾಲಾಸೋರ್‌ನಿಂದ ೫೦ ಕಿಲೋ ಮೀಟರ್ ದೂರದಲ್ಲಿ ಈ ಚಂಡಮಾರುತ ಅಪ್ಪಳಿಸಿದೆ. ಪ್ರತಿ ಗಂಟೆಗೆ ಸುಮಾರು ೧೩೦ರಿಂದ ೧೫೫ ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ.
ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆಯು ಮೂರರಿಂದ ನಾಲ್ಕು ಗಂಟೆ ಒಳಗೆ ಪೂರ್ಣಗೊಳ್ಳುತ್ತದೆ. ಬಾಲಾಸೋರ್ ಮತ್ತು ಭದ್ರಕ್ ಜಿಲ್ಲೆಯಲ್ಲಿ ಅಪಾರ ಪರಿಣಾಮ ಬೀರಲಿದೆ’ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಜೆನಾ ತಿಳಿಸಿದ್ದಾರೆ.
ಹವಾಮಾನ ಇಲಾಖೆ ಈ ಮೊದಲು ಬಿರುಗಾಳಿಯು ಪ್ರತಿ ಗಂಟೆಗೆ ೧೫೫?೧೬೫ ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ ಎಂದು ಅಂದಾಜಿಸಿತ್ತು. ಆದರೆ, ಚಂಡಮಾರುತ ಅಪ್ಪಳಿಸುವ ಸಂದರ್ಭದಲ್ಲಿ ತೀವ್ರತೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಬಿರುಗಾಳಿ ಪ್ರತಿ ಗಂಟೆಗೆ ೧೬೫ ಕಿಲೋ ಮೀಟರ್ ಬದಲು ೧೩೦ರಿಂದ ೧೪೦ ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ಹಲವಡೆ ಮರಗಳು ಉರುಳಿ ಬಿದ್ದಿರೆ ಸಾವಿರಾರು ಮನೆಗಳಿಗೆ ಹಾನಿಯಾಗಿದ್ದು ಅದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು ಸುಮಾರು ೨೦ ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’
ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಾದ ಪೂರ್ವ ಮಿದ್ನಾಪುರ ಮತ್ತು ದಕ್ಷಿಣ ೨೪ ಪರಗಣದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಪೂರ್ವ ಮಿದ್ನಾಪುರದಲ್ಲಿ ಹಲವು ಒಡ್ಡುಗಳು ಒಡೆದುಹೋಗಿವೆ.
ಪೂರ್ವ ಮಿದ್ನಾಪುರದ ದಿಘಾಪುರದಲ್ಲಿ ಪ್ರತಿ ಗಂಟೆಗೆ ೯೦ ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿತ್ತು. ಕೋಲ್ಕತ್ತದಲ್ಲೂ ಪ್ರತಿ ಗಂಟೆಗೆ ೬೨ ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿತ್ತು. ದಕ್ಷಿಣ ಬಂಗಾಳದ ಪ್ರದೇಶಗಳಲ್ಲೂ ಮಂಗಳವಾರ ರಾತ್ರಿಯಿಂದ ಭಾರೀ ಮಳೆಯಾಗಿದೆ.ಪಶ್ಚಿಮ ಬಂಗಾಳದಲ್ಲಿ ೯ ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಒಡಿಶಾದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಭದ್ರಕ್ ಜಿಲ್ಲೆಯಲ್ಲಿ ೨೭೩ ಮಿಲಿಮೀಟರ್ ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ ಇದಾಗಿದೆ.
ಪಶ್ಚಿಮ ಬಂಗಳಾದಲ್ಲಿ ಚಂಡಮಾರುತದ ಬಳಿಕ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವಿಗೀಡಾಗಿದ್ದು, ೮೦ ಮನೆಗಳು ಭಾಗಶಃ ಹಾನಿಗೊಳಗಾಗಿವೆ
ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದೆ. ಸದ್ಯ ಗಂಟೆಗೆ ೧೩೦ ರಿಂದ ೧೪೦ ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಗಾಳಿಯ ವೇಗ ಮತ್ತಷ್ಟು ತೀವ್ರವಾಗಲಿದೆ. ೧೫೫ ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಉಮಾಶಂಕರ್ ದಾಸ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ, ಪೂರ್ವ ಕರಾವಳಿಯಲ್ಲಿರುವ ಒಡಿಶಾ ಮತ್ತು ಪಶ್ಚಿಮ ಬಂಗಾಳದ ೨೦ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಲಾಗಿದೆ. ನೆರೆಯ ಜಾರ್ಖಂಡ್‌ಗೂ ಮುನ್ನೆಚ್ಚರಿಕೆ ನೀಡಲಾಗಿದೆ.
ಎನ್‌ಡಿಆರ್‌ಎಫ್ ತಂಡ:
ಯಾಸ್ ಅಪ್ಪಳಿಸುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ೧೧೨ ತುಕಡಿಗಳನ್ನು ನಿಯೋಜಿಸಲಾಗಿದೆ.
ಇದರಲ್ಲಿ ೫೨ ತಂಡಗಳನ್ನು ಒಡಿಶಾಕ್ಕೆ ಹಾಗೂ ೪೫ ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ. ಉಳಿದ ತಂಡಗಳು ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಹಾಗೂ ಅಂಡಮಾನ್ ನಿಕೋಬಾರ್‌ನಲ್ಲಿ ನಿಯೋಜನೆಗೊಂಡಿವೆ.
‘ಯಸ್’ ಚಂಡಮಾರುತದಿಂದ ಇಂದು ಪೂರ್ವ ಕರಾವಳಿಯ ಪೂರ್ವ ಮೇದಿನಿಪುರ ಮತ್ತು ದಕ್ಷಿಣ ಪರಗಣದಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಲಿದೆ ಎಂದಿದ್ದಾರೆ ಕೋಲ್ಕತಾದ ಹವಾಮಾನ ಇಲಾಖೆಯ ಉಪ ನಿರ್ದೇಶಕ ಸಂಜಿಬ್ ಬ್ಯಾನರ್ಜಿ.
ಅಲೆಗಳ ಆರ್ಭಟ ಹೆಚ್ಚಳ:
ಹುಣ್ಣಿಮೆ ದಿನದಂದು ಕಡಲಲ್ಲಿ ನೀರಿನ ಮಟ್ಟವು ಕನಿಷ್ಠ ಒಂದು ಮೀಟರ್‌ನಷ್ಟು ಏರಿಕೆಯಾಗುವುದರಿಂದ ಅಲೆಗಳ ಆರ್ಭಟವು ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲಿಯೂ ಚಂದ್ರ ಭೂಮಿಗೆ ಸಮೀಪದಲ್ಲಿರುವಾಗ ಸಮುದ್ರದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟದಲ್ಲಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಚಂಡಮಾರುತವು ಅಪ್ಪಳಿಸುತ್ತಿರುವುದರಿಂದ ಪೂರ್ವ ಮೇದಿನಿಪುರದಲ್ಲಿ ಅಲೆಗಳ ಆರ್ಭಟ ೨ರಿಂದ ೪ ಮೀಟರ್‌ಗಳ ವರೆಗೂ ಇರಲಿದ್ದು, ಈಗಾಗಲೇ ಹವಾಮಾನ ಇಲಾಖೆ ’ರೆಡ್ ಅಲರ್ಟ್’ ಘೋಷಿಸಿದೆ.
ಕರಾವಳಿಗೆ ನುಗ್ಗಿದ ನೀರು:
ಸಮುದ್ರ ಮತ್ತು ನದಿಗಳ ನೀರು ಕರಾವಳಿಯ ಕೆಲವು ಭಾಗಗಳಿಗೆ ನುಗ್ಗಿದ್ದು ಈಗಾಗಲೇ ಸುಮಾರು ಒಂಬತ್ತು ಲಕ್ಷ ಜನರನ್ನು ಸ್ಥಳಾಂತರಿಸಿ ರಾಜ್ಯಸರ್ಕಾರವು ಸುಮಾರು ೩ ಲಕ್ಷ ಜನ ಸರ್ಕಾರಿ ನೌಕರರನ್ನು ವಿಪತ್ತು ನಿರ್ವಹಣಾ ಕಾರ್ಯಗಳಿಗೆ ನಿಯೋಜಿಸಿದೆ
ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಭಾರತೀಯ ಸೇನೆಯು ಎಲ್ಲಾ ರೀತಿಯ ಸಂದರ್ಭಗಳನ್ನು ಎದುರಿಸಲು ಸನ್ನದ್ಧವಾಗಿರುವ ೧೭ ತುಕಡಿಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಿದೆ.ಯಾಸ್ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ಎನ್‌ಡಿಆರ್‌ಎಫ್‌ನ ೫೨ ತಂಡಗಳನ್ನು ಒಡಿಶಾಕ್ಕೆ ಹಾಗೂ ೪೫ ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಯಾಸ್ ಚಂಡಮಾರತದ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದು ಬಂಗಾಳದಲ್ಲಿ ವಿಮಾನ, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಿಂದ ೧೧.೫ ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದ್ದು, ೨೦ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.