ಯಾಸ್‌ ಚಂಡಮಾರುತ: ಭಾರತ ಜೊತೆ ಕೈಜೋಡಿಸಲು ಸಿದ್ದ; ವಿಶ್ವಸಂಸ್ಥೆ ಘೋಷಣೆ

ನ್ಯೂಯಾರ್ಕ್, ಮೇ 2೮- ‘ಯಾಸ್’ ಚಂಡಮಾರುತವು ಭಾರತೀಯ ಪೂರ್ವ ಕರಾವಳಿಯನ್ನು ಜರ್ಝರಿತಗೊಳಿಸಿರುವ ಹಿನ್ನೆಲೆಯಲ್ಲಿ, ಭಾರತ ಸರಕಾರದಿಂದ ಮನವಿ ಬಂದರೆ ಪರಿಹಾರ ಕಾರ್ಯಾಚರಣೆಯಲ್ಲಿ ಕೈಜೋಡಿಸಲು ವಿಶ್ವಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳು ಸಿದ್ಧವಾಗಿವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದ್ದಾರೆ.

ಅದೇ ವೇಳೆ, ಪರಿಹಾರ ಶಿಬಿರಗಳಲ್ಲಿ ಸುರಕ್ಷಿತ ಅಂತರ ಪಾಲನೆಯ ಕೊರತೆಯಿದೆ ಹಾಗೂ ಲಸಿಕೆ ನೀಡಿಕೆ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾಗಾಗಿ, ಈ ವಲಯದಲ್ಲಿ ಕೊರೋನ ವೈರಸ್ ಪರಿಸ್ಥಿತಿಯು ಮತ್ತಷ್ಟು ಹದಗೆಡಬಹುದಾಗಿದೆ ಎಂದು ಅವರು ಎಚ್ಚರಿಸಿದ್ದಾರೆ ‘‘ದಕ್ಷಿಣ ಏಶ್ಯಕ್ಕೆ ಯಾಸ್ ಚಂಡಮಾರುತ ಅಪ್ಪಳಿಸಿದೆ. ಆದರೆ, ಚಂಡಮಾರುತಕ್ಕೆ ಸಿದ್ಧತೆಯಾಗಿ ಆಹಾರ ಪದಾರ್ಥಗಳು ಮತ್ತು ಇತರ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿರುವುದಾಗಿ ನಮ್ಮ ಸಹೋದ್ಯೋಗಿಗಳು ತಿಳಿಸಿದ್ದಾರೆ’’ ಎಂದು ಬುಧವಾರ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದರು. ‘‘ಭಾರತದ ಒಡಿಶಾ ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸಿದೆ. ಚಂಡಮಾರುತ ಅಪ್ಪಳಿಸುವ ಮುನ್ನ ಸರಕಾರವು ಲಕ್ಷಾಂತರ ಜನರನ್ನು ಸ್ಥಳಾಂತರಿಸಿದೆ. ಭಾರತ ಸರಕಾರದಿಂದ ಮನವಿ ಬಂದರೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಮತ್ತು ಭಾರತದಲ್ಲಿರುವ ನಮ್ಮ ಭಾಗೀದಾರರು ಪರಿಹಾರ ಕಾರ್ಯಾಚರಣೆಯಲ್ಲಿ ಕೈಜೋಡಿಸಲು ಸಿದ್ಧರಾಗಿದ್ದಾರೆ’’ ಎಂದು ಅವರು ಹೇಳಿದರು.