ಯಾವ ವಸ್ತು ಉತ್ಪಾದನೆಯಾಗುತ್ತೋ ಅದು ಸಮರ್ಪಕವಾಗಿ ಬಳಕೆಯಾಗಬೇಕು

ಮೈಸೂರು: ಜೂ.03: ಕಡಕೊಳ ಜಗದೀಶ್ ಅಭಿಮಾನಿ ಬಳಗ ಮತ್ತು ಡಿಟಿಎಸ್ ಫೌಂಡೇಶನ್ ವತಿಯಿಂದ ರೈತರ ಸಂಕಷ್ಟಕ್ಕೆ ನೆರವಾಗಲು ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅದನ್ನು ಅಸಹಾಯಕರಿಗೆ ಉಚಿತವಾಗಿ ವಿತರಿಸುವ ಕಾರ್ಯವನ್ನು ಇಂದು ಚಾಮುಂಡಿಪುರಂ ಅಪೂರ್ವ ಹೋಟೆಲ್‍ನ ಮುಂಭಾಗ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ ವಿನೂತನ ಪ್ರಯೋಗ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ರೈತರಿಗೆ ಅನುಕೂಲವಾಗುವಂತಹ ಒಂದು ಒಳ್ಳೆಯ ಕೆಲಸವನ್ನು ಕೋವಿಡ್ ಎರಡನೆ ಅಲೆಯ ಮಧ್ಯದಲ್ಲಿ ಜಗದೀಶ್ ಮತ್ತು ಡಿ.ಟಿ.ಎಸ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದಾರೆ.
ರೈತರಿಂದ ನೇರವಾಗಿ ಖರೀದಿಯನ್ನು ಮಾಡಿ ಅದನ್ನು ಯಾರು ಸಾರ್ವಜನಿಕರು ಅಶಕ್ತರಿದ್ದಾರೋ ಅವರು ಬಂದು ಇಲ್ಲಿ ಪಡೆದುಕೊಳ್ಳಬಹುದು. ಉಚಿತವಾಗಿ ಕೊಡುವಂತಹ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಯಾತಕ್ಕಾಗಿ ಅಭಿನಂದನೆಯನ್ನು ಸಲ್ಲಿಸಬೇಕು ಅಂದರೆ ಇವತ್ತು ರೈತರ ಸ್ಥಿತಿ ಬಹಳ ಆತಂಕಕ್ಕೊಳಗಾಗಿದೆ. ಆತ ಬೆಳೆದ ಬೆಳೆ ಕೈಗೆ ಬಂದಿದೆ. ಆದರೆ ಬೆಲೆ ಪ್ರಶ್ನೆ ಇರಲಿ, ಮಾರಾಟವನ್ನೇ ಮಾಡಲು ಸಾಧ್ಯವಾಗುತ್ತಿಲ್ಲ. ಶೂನ್ಯ ಸ್ಥಿತಿ ತಲುಪಿರತಕ್ಕ ದುಸ್ಥಿತಿಗೆ ಬಂದಿದ್ದು ಲಾಕ್ ಡೌನ್ ಕಾರಣಕ್ಕಾಗಿ. ಅಂತಹ ಒಂದು ಸ್ಥಿತಿಯಲ್ಲಿ ರೈತರಿಂದ ನೇರವಾಗಿ ಖರೀದಿ ಮಾಡಿ ಅದನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಒಳ್ಳೆಯ ಕಾರ್ಯ ನಡೆಯುತ್ತಿದೆ. ಇದು ಶ್ಲಾಘನೀಯ ಕಾರ್ಯ ಎಂದರು.
ಯಾವ ವಸ್ತು ಉತ್ಪಾದನೆಯಾಗುತ್ತೋ ಅದು ಸಮರ್ಪಕವಾಗಿ ಬಳಕೆಯಾಗಬೇಕು. ಇಲ್ಲದಿದ್ದರೆ ತರಕಾರಿ ಕೊಳೆತು ಹಾಳಾಗಲಿದೆ. ತಾಜಾ ತರಕಾರಿಯನ್ನು ಉಚಿತವಾಗಿ ವಿತರಿಸುವ ಮೂಲಕ ಒಂದು ಕಡೆ ಗ್ರಾಹಕರು, ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ, ರೈತರಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸವನ್ನು ಡಿಟಿಎಸ್ ಫೌಂಡೇಶನ್, ಜಗದೀಶ್ ಮತ್ತು ಗೆಳೆಯರು ಮಾಡಿರುವುದಕ್ಕೆ ನನ್ನ ಕೃತಜ್ಞತೆ ಎಂದು ತಿಳಿಸಿದರು.
ಸಾರ್ವಜನಿಕರು ಯಾವುದೇ ಸಂಕೋಚವಿಲ್ಲದೆ, ಈ ಆಹಾರ ಪದಾರ್ಥವನ್ನು ಇಲ್ಲಿ ಬಂದು ಸರದಿಯಲ್ಲಿ ಬಂದು ಪಡೆಯಿರಿ, ತಾಜಾ ತರಕಾರಿ ಸಿಗುತ್ತಿದೆ. ಈ ಲಾಕ್ ಡೌನ ಸನ್ನಿವೇಶದಲ್ಲಿ ಇಂದು ಬೆಳಿಗ್ಗೆ 6ರಿಂದ 12ಗಂಟೆಯವರೆಗೆ ತೆರೆದಿರತಕ್ಕ ದಿನ. ಆ ಕಾರಣಕ್ಕಾಗಿ ಈ ದಿನವನ್ನೇ ಆಯ್ಕೆ ಮಾಡಿರುವುದಕ್ಕೂ ಕೂಡ ನೇತೃತ್ವ ವಹಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರ ಸದುಪಯೋಗವಾಗಲಿ. ಎಲ್ಲರೂ ಕೂಡ ಒಟ್ಟಾಗಿ ಕೊರೋನಾವನ್ನು ಎದುರಿಸುತ್ತೇವೆ ಎನ್ನುವ ಗುಣದಿಂದ ಕೊರೋನಾ ತಡೆಯಲು ಸಾಧ್ಯವಾಗಲಿದೆ. ಕೊರೋನಾ ಸಂಖ್ಯೆ ಕಡಿಮೆ ಆಗುತ್ತಿದೆ. ಎಚ್ಚರಿಕೆ ಮಾತ್ರ ಮರೆಯಬಾರದು, ಮಾಸ್ಕ್ ಹಾಕಿಕೊಳ್ಳಬೇಕು. ಅಂತರ ಕಾಯ್ದುಕೊಳ್ಳಬೇಕು. ಶುಚಿತ್ವ ಕಾಯ್ದುಕೊಂಡರೆ ಕೊರೋನಾದಿಂದ ಎಲ್ಲರೂ ದೂರವಿರಬಹುದು ಎಂದರು.
ಡಿ.ಟಿ.ಪ್ರಕಾಶ್ ಮಾತನಾಡಿ ಇಡೀ ಪ್ರಪಂಚವೇ ಸಂಕಷ್ಟದಲ್ಲಿ ಸಿಲುಕಿರುವಾಗ ಒಬ್ಬರಿಗೊಬ್ಬರು ಸಹಾಯ ಮಾಡಿ ಪರಿಸ್ಥಿತಿಯನ್ನು ನಿಭಾಯಿಸಬೇಕೇ ಹೊರತು ನಮ್ಮ ಪಾಡಿಗೆ ನಾವು ಇದ್ದರೆ ಆಗಲ್ಲ, ಹೋದ ವಾರ ವಕೂಡ ತರಕಾರಿಯನ್ನು ಕೊಟ್ಟಿದ್ದೇವೆ. ಲಾಕ್ ಡೌನ್ ತೆರೆದಿರುವುದರಿಂದ ತರಕಾರಿ ಕೊಡುತ್ತಿದ್ದೇವೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದರು.
ಟೊಮೆಟೊ-1ಟನ್, ಕೋಸು 1ಟನ್ ,ಮಂಗಳೂರು ಸೌತೆಕಾಯಿ -1ಟನ್,ದಪ್ಪ ಮೆಣಸಿನಕಾಯಿ -1ಟನ್, ಕುಂಬ್ಳಕಾಯಿ -1ಟನ್ ನ್ನು ರೈತರಿಂದ ಖರೀದಿಸಿ ಉಚಿತವಾಗಿ ವಿತರಿಸಲಾಯಿತು.
ಕಡಕೊಳ ಜಗದೀಶ್, ಅಜಯ್ ಶಾಸ್ತ್ರಿ ಅಪೂರ್ವ ಸುರೇಶ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಬಸವರಾಜ್ ಬಸಪ್ಪ, ಚಕ್ರಪಾಣಿ, ಸುಚೇಂದ್ರ, ವಿನಯ್ ಕಣಗಾಲ್ ಇನ್ನಿತರರು ಹಾಜರಿದ್ದರು.