ಯಾವ ಪಕ್ಷವನ್ನು ಬೆಂಬಲಿಸ ಬೇಕೆಂದು ಅವರಿಗೆ ಬಿಟ್ಟಿದ್ದು

ಕೋಲಾರ,ಮಾ,೧೫- ಕೋಲಾರದಲ್ಲಿ ದಲಿತರು ಯಾವ ಪಕ್ಷಕ್ಕೆ ಮತ ಹಾಕಬೇಕು ಎನ್ನುವ ತೀರ್ಮಾನ ಕ್ಷೇತ್ರದವರಿಗೆ ಬಿಟ್ಟಿದ್ದು. ಸಿದ್ದರಾಮಯ್ಯ ಸರಿ ಇಲ್ಲ, ಕಾಂಗ್ರೆಸ್ ಸರಿ ಇಲ್ಲ ಎನ್ನುವುದಾದರೆ ಬೇರೆ ಯಾವ ಪಕ್ಷಕ್ಕೆ ಮತ ಹಾಕಬೇಕು ಎನ್ನುವ ಕುರಿತು ಅವರೇ ತೀರ್ಮಾನ ಮಾಡಿಕೊಳ್ಳಲಿ ಎಂದು ಕೆಜಿಎಫ್ ಮಾಜಿ ಶಾಸಕ ಎಸ್.ರಾಜೇಂದ್ರನ್ ತಿಳಿಸಿದರು
ನಗರದ ರಂಗಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಆರ್‌ಪಿಐ ಪಕ್ಷಕ್ಕೆ ಇತಿಹಾಸವಿದ್ದು, ಬೇರೆ ಕಡೆಗಳಲ್ಲಿ ಅನೇಕರು ಸಿಎಂ ಆಗಿದ್ದಾರೆ. ಅಂತಹ ಪವರ್ ಪುಲ್ ಪಕ್ಷದಲ್ಲಿ ನಾನು ಇರುವುದು. ಜೆಡಿಎಸ್, ಕಾಂಗ್ರೆಸ್ ಪಕ್ಷದಿಂದ ನಾನ್ಯಾಕೆ ಸ್ಪರ್ಧಿಸಬೇಕು. ನನಗೆ ಮತ ಹಾಕಿದರೆ ಜನರಿಗೆ ಒಳ್ಳೆಯದು, ಇಲ್ಲವಾದರೆ ನನಗೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
, ಅಂಬೇಡ್ಕರ್ ನನ್ನ ದೇವರು. ನಾನು ಯಾರಿಗೆ ಗುಲಾಮನಾಗುವುದಿಲ್ಲ. ೧೯೯೪ರಲ್ಲಿ ಹಾಗೂ ೨೦೦೪ರಲ್ಲಿ ಆರ್ ಪಿಐ ಪಕ್ಷದಿಂದ ಕಣಕ್ಕಿಳಿದು ಕೆಜಿಎಫ್ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಯಾರ ಬಳಿಯೂ ಹೋಗಿ ಮೈತ್ರಿಗೆ ಮುಂದಾಗಿಲ್ಲ. ಈ ಬಾರಿಯೂ ಆರ್,ಪಿ,ಐನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ ಎಂದು ಹೇಳಿದರು.
ದಲಿತರು ಒಗ್ಗಟ್ಟಾಗುವವರೆಗೂ ಯಾವ ಕೆಲಸಗಳೂ ಆಗುವುದಿಲ್ಲ. ನಾನು ಅಭಿಪ್ರಾಯ ಹೇಳಿದ ಕೂಡಲೇ ಬದಲಾಗುವುದಿಲ್ಲ. ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ನಾನು ಹೇಳಿದರೆ ರಾಜ್ಯದ ಜನ ಕೇಳುವುದಿಲ್ಲ. ಅದಕ್ಕಾಗಿ ತೀರ್ಮಾನ ಅವರಿಗೇ ಬಿಟ್ಟಿದ್ದು. ಒಬ್ಬೊಬ್ಬ ಮುಖಂಡರು ಒಂದೊಂದು ಗುಂಪಿನಲ್ಲಿ ಇದ್ದಾರೆ. ಒಬ್ಬರು ಮೋದಿಯೇ ನಮ್ಮ ದೇವರು ಎಂದರೆ ಮತ್ತೊಬ್ಬರು ರಾಹುಲ್ ಗಾಂಧಿ ನಮ್ಮ ದೇವರು, ಇನ್ನೊಬ್ಬರು ಸಿದ್ದರಾಮಯ್ಯ ನಮ್ಮ ದೇವರು ಅಂತಾರೆ ಹಾಗಾಗಿ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶಕ್ಕೆ ಎಲ್ಲರೂ ತಲೆಬಾಗಲೇ ಬೇಕೆಂದರು,
ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ನಾನು ಶಾಸಕನಾಗಿದ್ದೆ. ಅವರನ್ನು ದೆಹಲಿಯಲ್ಲಿ ಭೇಟಿಯಾಗಲು ಅರ್ಧಗಂಟೆ ತಡವಾಗಿ ಹೋದರೂ ನನಗೆ ಕಾದಿದ್ದರು. ಅಷ್ಟು ಗೌರವಯುತ ವ್ಯಕ್ತಿ. ನಂತರ ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ನಾನು ಶಾಸಕನಾಗಿದ್ದೆ, ಆ ವೇಳೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅವರಿಬ್ಬರೂ ನನ್ನನ್ನು ದಲಿತ ಎಂದು ನೋಡಿಲ್ಲ. ಅವರು ನನಗೆ ನೀಡಿರುವ ಗೌರವ ಸದಾ ಹೃದಯಲ್ಲಿರುತ್ತದೆ ಎಂದರು.