ಯಾವುದೇ ಸಮಾಜವನ್ನು ಗುರಿಯಾಗಿಸಿ ನಿಂದಿಸಿ ಮಾತನಾಡಿಲ್ಲ : ಶಾಸಕ ಕೆ.ಮಹದೇವ್ ಸ್ಪಷ್ಟನೆ

ಪಿರಿಯಾಪಟ್ಟಣ, ನ.05: ನಾನು ಯಾವುದೇ ಸಮಾಜವನ್ನು ಗುರಿಯಾಗಿಸಿ ನಿಂದಿಸಿ ಮಾತನಾಡಿಲ್ಲ ಎಂದು ಶಾಸಕ ಕೆ.ಮಹದೇವ್ ಸ್ಪಷ್ಟನೆ ನೀಡಿದರು.
ನ.2 ರಂದು ತಾಲ್ಲೂಕಿನ ಜವನಿಕುಪ್ಪೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ಸಂದರ್ಭದಲ್ಲಿ ಸಭೆ ಉದ್ದೇಶಿಸಿ ಮಾತನಾಡುವಾಗ ನಾನು ಯಾವುದೇ ಜಾತಿಯ ನಾಯಕರನ್ನಾಗಲಿ ಅಥವಾ ಯಾವುದೇ ಜಾತಿಯನ್ನಾಗಲೀ ವೈಯುಕ್ತಿಕವಾಗಿ ಎಲ್ಲಿಯೂ ಕೂಡ ನಿಂದಿಸಿಲ್ಲ ಆದರೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಮೂಲಕ ನಾನು 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಉಪ್ಪಾರ ಸಮಾಜದ ನಾಯಕರನ್ನು ನಿಂದಿಸಿ ಅವಮಾನಿಸಿದ್ದಾರೆಂದು ಬಿಂಬಿಸುವುದರ ಮೂಲಕ ನನ್ನ ವೈಯುಕ್ತಿಕ ತೇಜೋವಧೆ ಮಾಡುತ್ತಿದ್ದಾರೆಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಶಾಸಕ ಕೆ.ಮಹದೇವ್ ಉಪ್ಪಾರ ಸಮಾಜವನ್ನು ಹಾಗೂ ನಾಯಕರನ್ನು ನಿಂದಿಸಿದ್ದಾರೆಂಬ ವಿಷಯವನ್ನು ವಾಟ್ಸಾಪ್ ಮೂಲಕ ಹಬ್ಬಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೆÇಲೀಸ್ ಅಧಿಕಾರಿಗಳಿಗೆ ದೂರು ನೀಡುತ್ತಿರುವುದಾಗಿ ತಿಳಿಸಿ ಜವನಿಕುಪ್ಪೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ನಾನು ನನ್ನ ಇಂದಿನ ರಾಜಕೀಯ ಸ್ಥಿತಿಗತಿ ಹಾಗೂ ಈ ಹಿಂದೆ ನಾನು ಚುನಾವಣೆಯನ್ನು ಎದುರಿಸಿದ ಕಷ್ಟಕರ ಸಂದರ್ಭಗಳನ್ನು ಪ್ರಸ್ತಾಪನೆ ಮಾಡುತ್ತಾ 2013 ರ ಚುನಾವಣೆಯಲ್ಲಿ ಇಡೀ ತಾಲ್ಲೂಕಿನಾದ್ಯಂತ ನಾನು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ಭರವಸೆಯನ್ನು ತಾಲ್ಲೂಕಿನ ಜನತೆ ನೀಡಿತ್ತು ಅದೇ ಸಂದರ್ಭದಲ್ಲಿ ನನ್ನ ದುರದೃಷ್ಟಕ್ಕೆ ಅಭ್ಯರ್ಥಿ ಯೊಬ್ಬರು ಅಕಾಲಿಕ ಮರಣದಿಂದ ಸಾವಿಗೀಡಾಗಿದ್ದನ್ನು ಪ್ರಸ್ತಾಪಿಸಿ ಅಂದು ಅವರು ಸತ್ತಿದ್ದು ನಾನೇ ಸತ್ತಂತೆ ಆಗಿತ್ತು ಎಂಬುದನ್ನು ಮಾತ್ರ ನಾನು ವೇದಿಕೆಯಲ್ಲಿ ನೋವಿನಿಂದ ಹಂಚಿಕೊಂಡಿದ್ದು ನಿಜ, ಆದರೆ ಕೆಲವು ಕಿಡಿಗೇಡಿಗಳು ಇದನ್ನೇ ಬೇರೆ ರೀತಿಯಲ್ಲಿ ಬಿಂಬಿಸಿ ಶಾಸಕರು ಉಪ್ಪಾರ ಸಮಾಜದ ವಿರುದ್ಧ ಜಾತಿನಿಂದನೆ ಹಾಗೂ ವ್ಯಕ್ತಿಯನ್ನು ಅವಮಾನಪಡಿಸಿದ್ದಾರೆ ಎಂದು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಆ ರೀತಿ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಮ್ ಇಲಾಖೆಯ ಮೊರೆ ಹೋಗುತ್ತಿದ್ದೇನೆ ಎಂದ ಅವರು ಉಪ್ಪಾರ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರಿಗೆ ಈ ಪ್ರಕರಣದಿಂದ ನೋವುಂಟಾಗಿದ್ದಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದರು. ನಾನು ಶಾಸಕನಾಗಿ ಆಯ್ಕೆಯಾದ ನಂತರ ನಡೆದ ಚುನಾವಣೆಗಳಲ್ಲಿ ಉಪ್ಪಾರ ಸಮಾಜದ ಮುಖಂಡರಿಗೆ ಪ್ರಾಶಸ್ತ್ಯವನ್ನು ನೀಡಿದ್ದೇನೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದ ಅವರು ಈ ರೀತಿಯ ಕ್ಷುಲ್ಲಕ ಹಾಗೂ ಕಿಡಿಗೇಡಿಗಳ ಕುತಂತ್ರಕ್ಕೆ ಯಾವುದೇ ರೀತಿಯ ಮನ್ನಣೆಯನ್ನು ಸಮಾಜದ ನಾಯಕರು ನೀಡದೆ ಸಮಾಜದ ಹಿತ ಕಾಪಾಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸದಸ್ಯ ಕೆ.ಸಿ.ಜಯಕುಮಾರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಸದಸ್ಯ ಎಸ್.ರಾಮು, ಎಂ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮೈಮೂಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಮುಖಂಡರಾದ ನಂದೀಶ್, ಮಹದೇವ್, ವಸಂತ, ಶಿವಣ್ಣ, ಮೋಹನ್ ಉಪಸ್ಥಿತರಿದ್ದರು.