ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ: ಶೆಟ್ಟರ್


ಹುಬ್ಬಳ್ಳಿ, ಮೇ 28: ರಾಜ್ಯದಲ್ಲಿ ಕಾಂಗ್ರೆಸ್‍ಗೆ ಜನ ಬೆಂಬಲ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಯಾವರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋ ಅದನ್ನು ನಿಭಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದವರಿಗೂ ಪ್ರಸಕ್ತ ಸಂಪುಟದಲ್ಲಿ ಸಾಕಷ್ಟು ಅವಕಾಶಗಳು ದೊರೆತಿವೆ ಎಂದು ನುಡಿದರು.
ಕಾಂಗ್ರೆಸ್‍ನ ಗ್ಯಾರಂಟಿ' ಭರವಸೆ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಗ್ಯಾರಂಟಿ’ಗಳ ಅನುಷ್ಠಾನಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದ ಅವರು, ಪ್ರತಿಪಕ್ಷಗಳು ಇದನ್ನೂ ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ರಾಜಕಾರಣದಲ್ಲಿ ತಾಳ್ಮೆ ಬೇಕಾಗುತ್ತದೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣ ಕುರಿತಂತೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಈ ಕುರಿತಂತೆ ಹಿರಿಯ ನಾಯಕರೊಂದಿಗೂ ಚರ್ಚೆ ಆಗಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯಲ್ಲಿ ಪಕ್ಷ ಕಟ್ಟುವಂಥವರು ಯಾರಿದ್ದಾರೆ ? ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಈ ಪರಿಸ್ಥಿತಿಗೆ ತರಲು ಕಾರಣರಾದವರೆಲ್ಲ ಎಲ್ಲಿದ್ದಾರೆ. ಅವರೆಲ್ಲರೂ ಈಗ ನಾಪತ್ತೆಯಾಗಿದ್ದಾರೆ ಎಂದು ಪರೋಕ್ಷವಾಗಿ ಬಿ.ಎಲ್. ಸಂತೋಷ್ ಕುರಿತು ವ್ಯಂಗ್ಯವಾಡಿದರು.
ವಿರೊಧ ಪಕ್ಷದ ನಾಯಕನನ್ನು ಆರಿಸಲೂ ಯಾರೂ ಇಲ್ಲ. ಒಂದು ರಾಷ್ಟ್ರೀಯ ಪಕ್ಷಕ್ಕೆ ಇಂಥ ಸ್ಥಿತಿ ಬರಬಾರದಿತ್ತು ಎಂದು ಅವರು ಕುಟುಕಿದರು.