ಯಾವುದೇ ಗೊಂದಲ ಬೇಡ, ರಾಯಚೂರು ಹೆಸರು ಕೇಂದ್ರಕ್ಕೆ ಶಿಫಾರಸ್ಸು

ರಾಯಚೂರು,ಜೂ.೧೧-
ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಏಮ್ಸ್ ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಕರ್ನಾಟಕ ಸರ್ಕಾರ ಬದ್ದವಾಗಿದೆ ಎಂದು ಸಣ್ಣನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್ ಬೋಸರಾಜು ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರು ಇತ್ತೀಚಗೆ ಕಲಬುರಗಿಯಲ್ಲಿ ನೀಡಿರುವ ಏಮ್ಸ್ ಸ್ಥಾಪನೆಯ ಹೇಳಿಕೆಯ ವರದಿಯಿಂದ ರಾಯಚೂರು ಜಿಲ್ಲೆಯಲ್ಲಾದ ಗೊಂದಲ ನಿವಾರಣೆಗಾಗಿ ಕೆಪಿಸಿಸಿ ಅದ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಹಾಗೂ ಇಂದು ಬೆಳಗ್ಗೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಮ್ಸ್ ಸ್ಥಾಪನೆ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆ, ಡಾ. ಶರಣಪ್ರಕಾಶ ಪಾಟೀಲ್ ಕಲಬುರಗಿಗೆ ಏಮ್ಸ್ ಹೇಳಿಕೆಯ ವರದಿಯ ಬಗ್ಗೆ ಅವರ ಗಮನಕ್ಕೆ ತರಲಾಗಿದೆ.
ಅವರು ಸ್ಪಷ್ಠಪಡಿಸಿ, ಪಕ್ಷ ನೀಡಿದ ಪ್ರಣಾಳಿಕೆಯ ಭರವಸೆಯಂತೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ರಾಯಚೂರು ಜಿಲ್ಲೆಯ ಹೆಸರನ್ನು ಶಿಫಾರಸ್ಸು ಮಾಡಲಾಗುವುದೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಏಮ್ಸ್ ಸ್ಥಾಪನೆ ಕುರಿತು ಯಾವುದೆ ಗೊಂದಲ ಬೇಡ ಪಕ್ಷ ನೀಡಿದ ಭರವಸೆಯಂತೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ.
ಸನ್ಮಾನ್ಯ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರೊಂದಿಗೆ ಖುದ್ದಾಗಿ ಏಮ್ಸ್ ವಿಷಯ ಬಗ್ಗೆ ಮಾತನಾಡಲಾಗಿದೆ. ಅವರು, ನಾನು ಏಮ್ಸ್ ಸ್ಥಾಪನೆ ವಿಚಾರವಾಗಿ ಈ ರೀತಿ ಮಾತನಾಡಿಲ್ಲ, ಪತ್ರಿಕೆಗಳಲ್ಲಿ ಬಂದಿರುವ ವರದಿ ಅಲ್ಲೆಗಳೆದು ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗೆ ಬದ್ದವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗಾಗಿ ಹೆಚ್ಚಿನ ಗೊಂದಲ ಬೇಡ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಸೇರಿ ಜಿಲ್ಲೆಯ ಎಲ್ಲಾ ಶಾಸಕರು ಶೀಘ್ರವಾಗಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲು ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದರು.