
ವಿಜಯಪುರ:ಮೇ.9: ಚುನಾವಣಾ ಕಾರ್ಯ ಅತ್ಯಂತ ಜವಾಬ್ದಾರಿಯುತ ಹಾಗೂ ಮುಖ್ಯವಾಗಿರುವುದರಿಂದ ಯಾವುದೇ ಲೋಪಗಳಿಗೆ ಅವಕಾಶ ನೀಡದೆ ಪ್ರತಿಯೊಂದು ವಿಷಯನ್ನು ಅರಿತುಕೊಂಡು ಚುನಾವಣಾ ಕಾರ್ಯ ಯಶಸ್ವಿಯಾಗಿಸಲು ಕಾರ್ಯನಿರ್ವಹಿಸುವಂತೆ ಎಂಟೂ ವಿಧಾನಸಭಾ ಮತಕ್ಷೇತ್ರದ ನಿರ್ವಾಚನಾಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿರುವ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮತದಾನದ ಪೂರ್ವ ದಿನ ಹಾಗೂ ಮತದಾನ ದಿನದಂದು ನಿರ್ವಹಿಸುವ ಕಾರ್ಯಗಳ ಕುರಿತು ಅಗತ್ಯ ಸಲಹೆ ಸೂಚನೆ ನೀಡಿದ ಅವರು, ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸಬೇಕು. ಅವಕಾಶ ಇದ್ದಲ್ಲಿ ಮತಗಟ್ಟೆಯ ಹತ್ತಿರದ ಕೊಠಡಿಯಲ್ಲಿ ಮತದಾರರಿಗೆ ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲು ಮೊದಲೇ ಪರಿಶೀಲಿಸುವಂತೆ ತಿಳಿಸಿದರು. ನೆರಳಿನ ವ್ಯವಸ್ಥೆ ಮಾಡುವಂತೆಯೂ, ಬ್ಯಾರಿಕೇಡಿಂಗ್ ವ್ಯವಸ್ಥೆ, ಮತಗಟ್ಟೆಗಳನ್ನು ಪರಿಶೀಲಿಸಿ, ವಿದ್ಯುತ್, ಮತಗಟ್ಟೆಗಳ ಛಾವಣಿ ಪರಿಶಿಲಿಸುವುದು. ಜಿಲ್ಲೆಯ ಎಂಟೂ ವಿಧಾನ ಸಭಾ ಮತಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಖಿ ಮತಗಟ್ಟೆ, ಮಹಿಳಾ ಅಧಿಕಾರಿ ಸಿಬ್ಬಂದಿ, ವಿಶೇಷ ಚೇತನರ ಮತಗಟ್ಟೆ ಹಾಗೂ ಯುವ ಮತದಾರರ ಮತಗಟ್ಟೆ ಯುವ ಅಧಿಕಾರಿ ಸಿಬ್ಬಂದಿ ನಿಯೋಜನೆಯಾದ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರ ಪ್ರಥವi ಚಿಕಿತ್ಸಾ ಅನುಕೂಲ ಹಾಗೂ ಅಂಬುಲೆನ್ಸ್ ವ್ಯವಸ್ಥೆ, 60 ಕಡೆ ವಿಡಿಯೋಗ್ರಾಫರ ನೇಮಿಸಿದ್ದು ನಾಳೆಯೊಳಗ ವರದಿ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮತಗಟ್ಟೆ ಸಿಬ್ಬಂದಿಗೆ ಆಹಾರದ ವ್ಯವಸ್ಥೆ, ಸೆಕ್ಟರ್ ಅಧಿಕಾರಿ ಹೊಂದಿರುವ ವಾಹನಕ್ಕೆ ಜಿಪಿಎಸ್‍ನ್ನು ಕಡ್ಡಾಯವಾಗಿ ಅಳವಡಿಸಿರಬೇಕು. ಇವಿಎಂ ಯಂತ್ರಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ನಿಷ್ಕಾಳಜಿ ವಹಿಸಬಾರದು. ಇವಿಎಂ ಮತಯಂತ್ರಗಳ ಸಾಗಾಣಿಕೆ ಸಂದರ್ಭದಲ್ಲಿ ಸಶಸ್ತ್ರ ಪೋಲಿಸ್ ಸಿಬ್ಬಂದಿಗಳು ಹೊಂದಿರಬೇಕು. ಚುನಾವಣಾ ಕಾರ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಸಮಸ್ಯೆ ಉಂಟಾದಲ್ಲಿ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದ ಅವರು, ಯಾವುದೇ ಗೊಂದಲಕ್ಕೆ ಒಳಗಾಗದೇ ಆಯೋಗದ ಮಾರ್ಗಸೂಚಿಯನ್ವಯ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.