ಯಾವುದೇ ಒಕ್ಕೂಟದಲ್ಲಿ ನಾವಿಲ್ಲ: ಕೆಸಿಆರ್

ಹೈದರಾಬಾದ್,ಆ.೨:ಎನ್‌ಡಿಎ ಇಲ್ಲ ಇಂಡಿಯಾ ಯಾವುದೇ ಒಕ್ಕೂಟದಲ್ಲಿ ನಾವಿಲ್ಲ ಎಂದು ಭಾರತೀಯ ರಾಷ್ಟ್ರೀಯ ಪಕ್ಷ(ಬಿಆರ್‌ಎಸ್) ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಹೇಳಿದರು.ಹೈದರಾಬಾದ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಮತ್ತು ಇಂಡಿಯಾ ಯಾವುದೇ ಒಕ್ಕೂಟಕ್ಕೂ ನಾವು ಸೇರಿಲ್ಲ, ಸೇರುವ ಇಚ್ಛೆಯೂ ನಮಗೆ ಇಲ್ಲ ಎಂದರು.ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟಕ್ಕೆ ನಾವು ಸೇರಿಲ್ಲ ಎಂಬ ಕಾರಣಕ್ಕೆ ನಾವೇನೂ ಏಕಾಂಗಿ ಅಲ್ಲ, ನಮಗೂ ಗೆಳೆಯರ ಬಳಗ ಇದೆ ಎಂದು ಕೆಸಿಆರ್ ಹೇಳುವ ಮೂಲಕ ಬಿಆರ್‌ಎಸ್ ತನ್ನದೇ ಆದ ಮೈತ್ರಿ ಕೂಟ ಹೊಂದಲಿದೆ ಎಂಬ ಸುಳಿವು ನೀಡಿದ್ದಾರೆ.ಇಂಡಿಯಾ ಮೈತ್ರಿಕೂಟದಲ್ಲಿ ವಿಶೇಷ ಏನಿದೆ. ೫೦ ವರ್ಷ ಅಧಿಕಾರದಲ್ಲಿದ್ದವರು ಯಾವುದೇ ಬದಲಾವಣೆ ತರಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಪಕ್ಷ ನಾಯಕರುಗಳ ಸಭೆಯಿಂದ ಬಿಆರ್‌ಎಸ್ ಪಕ್ಷ ಅಂತರ ಕಾಯ್ದುಕೊಂಡು ಆ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.