ಯಾರ ಕೊರಳಿಗೆ ಬಿಹಾರ


ಪಾಟ್ನಾ,ನ.೭- ಕೋರೋನಾ ಬಿಕ್ಕಟ್ಟಿನ ನಡುವೆಯೇ ಮೊದಲ ಬಾರಿಗೆ ಬಿಹಾರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಇಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಕೊನೆಯ ಹಂತದ ಚುನಾವಣೆಯಲ್ಲಿ ೧೬ ಜಿಲ್ಲೆಗಳ ೭೮ ವಿಧಾನಸಭಾ ಕ್ಷೇತ್ರಗಳಿಗೆ ಬಿರುಸಿನ ಮತದಾನ ನಡೆಯುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಹಾಗೂ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟ ಮಹಾಘಟಬಂಧನ್ ನಡುವೆ ಜಿದ್ದಾಜಿದ್ದಿನ ಹೋರಾಟದ ಅಖಾಡವಾಗಿರುವ ಬಿಹಾರ ವಿಧಾನಸಭಾ ಚುನಾವಣೆ ಈ ನಾಯಕರುಗಳಿಗೆ ರಾಜಕೀಯ ಪ್ರತಿಷ್ಠೆ ಯಾಗಿ ಪರಿಣಮಿಸಿದೆ.

ಚುನಾವಣಾ ಕಣದಲ್ಲಿ ೧೨೦೪ ಅಭ್ಯರ್ಥಿಗಳು ಇದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುಮಾರು ೨ ಕೋಟಿಗೂ ಅಧಿಕ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ಸಂಜೆ ವೇಳೆಗೆ ನಿರ್ಧರಿಸಲಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಮತಗಟ್ಟೆಗಳ ಸುತ್ತಮುತ್ತ ಬಿಗಿಬಂದೋಬಸ್ತ್ ಏರ್ಪಡಿಸಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಹಂತದ ಚುನಾವಣೆಯಲ್ಲಿ ಆರ್ ಜೆಡಿ ಪಕ್ಷದ ೪೬ ಅಭ್ಯರ್ಥಿಗಳು ಕಣದಲ್ಲಿದ್ದು ಈ ಪಕ್ಷದ ಗರಿಷ್ಠ ಪ್ರಮಾಣದ ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ.

ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷದ ೪೨ ಅಭ್ಯರ್ಥಿಗಳು ಸಂಯುಕ್ತ ಜನತಾದಳದ ೩೭ ಅಭ್ಯರ್ಥಿಗಳು ಭಾರತೀಯ ಜನತಾ ಪಾರ್ಟಿ ೩೫ ಹಾಗೂ ಕಾಂಗ್ರೆಸ್ ಪಕ್ಷದ ೨೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಎನ್ ಡಿಎ, ಹಾಗೂ ಮಹಾಘಟಬಂಧನ್ ಮೈತ್ರಿಕೂಟಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದು ಮೂರನೇ ರಾಜಕೀಯ ರಂಗ ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ವಿಧಾನಸಭಾಧ್ಯಕ್ಷ ವಿಜಯ್ ಕುಮಾರ್ ಚೌದರಿ, ಶರದ ಪವಾರ್ ಅವರ ಪುತ್ರಿ ಮಾಜಿ ಸಚಿವರು ಆಗಿರುವ ಸುಭಾಷಿಣಿ ಸೇರಿದಂತೆ ಆಡಳಿತರೂಢ ಜನತಾದಳದ ಎಂಟು ಸಚಿವರು ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲು ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಚುನಾವಣಾ ಆಯೋಗವೇ ಮತದಾನ ವ್ಯವಸ್ಥೆ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರತಿಯೊಬ್ಬ ಮತದಾರರಿಗೂ ಸ್ಯಾನಿಟೈಜರ್ ಮತ್ತು ಟರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ.

ಮೋದಿ, ಅಮಿತ್ ಶಾ ಮನವಿ

ಬಿಹಾರದ ಅಂತಿಮ ಹಾಗೂ ಮೂರನೇ ಹಂತದ ಮತದಾನದಲ್ಲಿ ಮತದಾರರು ಗರಿಷ್ಠ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ಹಾಜರಾಗಿ ತಮ್ಮ ಸಂವಿಧಾನ ಬದ್ಧ ಹಕ್ಕು ಚಲಾಯಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.

ಕೋವಿಡ್ ೧೯ ರ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ವಿಶೇಷವಾಗಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ.