ಬೆಂಗಳೂರು, ಏ. ೧೦- ರಾಜಕಾರಣದಲ್ಲಿ ಯಾರೇ ಸ್ಪರ್ಧಿಸಿದರೂ ಅವರ ವಿರುದ್ಧ ಹೋರಾಡಬೇಕು. ಅವರನ್ನು ಎದುರಿಸಬೇಕು. ಚುನಾವಣೆಯಲ್ಲಿ ಯಾರು ಯಾರ ವಿರುದ್ಧ ಬೇಕಾದರೂ ನಿಲ್ಲಬಹುದು. ನನ್ನ ವಿರುದ್ಧ ಸಚಿವ ಅಶೋಕ್ ಸ್ಪರ್ಧೆ ಮಾಡುವುದಾದರೂ ಅವರಿಗೆ ನನ್ನ ಸ್ವಾಗತವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.ನಾಡಿನ ಇತಿಹಾಸ ಪ್ರಸಿದ್ದ ಶೃಂಗೇರಿಯ ಶಾರದಾಂಬೆ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಅಶೋಕ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚರ್ಚೆ ನಡೆಸುತ್ತಿದೆ ಎಂಬ ಮಾಹಿತಿ ಇದೆ. ಅಶೋಕ್ ನನ್ನ ವಿರುದ್ಧ ಸ್ಪರ್ಧಿಸಿದರೆ ಅದನ್ನು ಸ್ವಾಗತಿಸುತ್ತೇನೆ ಎಂದರು.ಶಾರದಾಂಬೆಯ ದರ್ಶನಕ್ಕೆ ಬಂದಿದ್ದೇನೆ. ಇಲ್ಲಿ ಹೆಚ್ಚು ರಾಜಕಾರಣ ಮಾತನಾಡುವುದು ಬೇಡ. ಯಾರೇ ಸ್ಪರ್ಧೆ ಮಾಡಿದರೂ ಅವರನ್ನು ಎದುರಿಸಬೇಕು, ಹೋರಾಡಲೇಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ೩ನೇ ಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. ದೆಹಲಿಯಲ್ಲಿಂದು ಸಂಜೆ ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದರು.
ದೇವಸ್ಥಾನ ಭೇಟಿ
ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಅವರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಕಳೆದ ಸೋಮವಾರ ಅವರು ಆಂಧ್ರದ ಶ್ರೀ ಕಾಳಹಸ್ತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು ಶೃಂಗೇರಿಗೆ ಭೇಟಿ ನೀಡಿದ್ದು, ಮಧ್ಯಾಹ್ನ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬೇಕಿತ್ತಾದರೂ ದೆಹಲಿಯಲ್ಲಿ ಸಭೆ ಕಾರಣ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳ ಭೇಟಿಯನ್ನು ಮುಂದೂಡಿದ್ದಾರೆ. ಶೃಂಗೇರಿ ಭೇಟಿ ನಂತರ ಅವರು ದೆಹಲಿಗೆ ತೆರಳಿದರು.