ಯಾರೇನೆ ಕೊಡಲಿ ತೆಗೆದುಕೊಳ್ಳಿಓಟ್ ಮಾತ್ರ ಬಿಜೆಪಿಗೆ ಹಾಕಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,7- ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ  ಮತದಾನಕ್ಕೆ  ಅಮಿಷ ಸರಿಯಲ್ಲ. ಆದರೆ ವ್ಯವಸ್ಥೆಯೇ ಹದಗೆಟ್ಟಿದೆ. ನಾವು ಬೇಡ ಎಂದರೂ, ಬೇರೆಯವರು ಬಿಡಬೇಕಲ್ಲ‌. ಚುನಾವಣೆ ಘೋಷಣೆ ಮುನ್ನವೇ ಕುಕ್ಕರ್, ಸೀರೆ ಹಂಚಿದ್ದಾರೆ. ಈಗಲೂ ಮತ್ತೇ ಏನಾದರೂ ಕೊಡಬಹುದು. ಕೊಟ್ಟಿದ್ದನ್ನು ತೆಗೆದುಕೊಳ್ಳಿ. ಆದರೆ ಕಳೆದ ಐದು ವರ್ಷಗಳಿಂದ ನಗರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ  ಬಿಜೆಪಿಗೆ ಮತ‌ನೀಡಿ ಎಂದು ನಗರ ಶಾಸಕ, ಬಿಜೆಪಿ ಅಭ್ಯರ್ಥಿ‌ ಗಾಲಿ ಸೋಮಶೇಖರ ರೆಡ್ಡಿ ಮನವಿ ಮಾಡಿದ್ದಾರೆ.
ಅವರು ನಿನ್ನೆ ರಾತ್ರಿ ಇಲ್ಲಿನ ವಿಶಾಲ ನಗರ, ಹನುಮಾನ್ ನಗರ, ಇಂದು ಬೆಳಿಗ್ಗೆ ಬಂಡಿಮೋಟ, ಇಂದಿರಾ ನಗರ, ಬಳ್ಳಾರೆಪ್ಪ ಕಾಲೋನಿ ಮೊದಲಾದ ಪ್ರದೇಶದಲ್ಲಿ ಮತಯಾಚನೆ ಮಾಡಿ ಮಾತನಾಡುತ್ತಿದ್ದರು. ಕಳೆದ ಐದು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಒಂದೇ ಒಂದು ರಸ್ತೆ ಸರಿಯಾಗಿ ಇರಲಿಲ್ಲ. ಕೆಸರು ಗದ್ದೆಯಂತೆ ಇರುತ್ತಿದ್ದ ರಸ್ತೆಗಳೆಲ್ಲ ಈಗ ಕಾಂಕ್ರೀಟ್ ರಸ್ತೆ  ಮಾಡಿದೆ. ಬೀದಿ ದೀಪ, ಡ್ರೈನೇಜ್ ವ್ಯವಸ್ಥೆ ಮಾಡಿದೆ‌ ಹೀಗೆ ನಗರದ ಯಾವುದೇ ಪ್ರದೇಶದ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನಿಮಗೆ ಮೂಲಭೂತ ಸಮಸ್ಯೆಗಳು ಎದುರಾದಾಗಲೆಲ್ಲ ಬಂದು ಆದಷ್ಟು ಬಗೆಹರಿಸಿರುವೆ. ನಗರದಲ್ಲಿನ ರಸ್ತೆಗಳ‌ ಅಗಲೀಕರಣ, ಸೌಂದರೀಕರಣ, ಉದ್ಯಾನವನಗಳ  ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಲು ಹೊಸ ಕೆರೆಗಳ ನಿರ್ಮಾಣ ಮಾಡಿದೆ. ಹೀಗಾಗಿ ನಮ್ಮದು ಅಭಿವೃದ್ಧಿ ರಾಜಕೀಯ, ಹಣದ ರಾಜಕೀಯ ಅಲ್ಲ. ಅದಕ್ಕಾಗಿ‌ ಯಾರೇನೆ ನೀಡಲಿ ತೆಗೆದುಕೊಂಡು ಅಭಿವೃದ್ಧಿಗಾಗಿ ಬಿಜೆಪಿಯ ಕಮಲದ ಗುರ್ತಿಗೆ ಮತ ನೀಡಿ ಎಂದರು.
ಮಾಜಿ ಮೇಯರ್ ಕೆ.ಬಸವರಾಜ್, ಮಾಜಿ ಉಪ‌ಮೇಯರ್ ಶಶಿಕಲ, ವೀರಶೇಖರ ರೆಡ್ಡಿ, ಎಸ್.ಮಲ್ಲನಗೌಡ, ಶ್ರೀನಾಥ್ ವಾಸ್ ಮೋತ್ಕರ್  ಮೊದಲಾದವರು ಇದ್ದರು.