ಯಾರು ಹಿತವರು ಕಮಲ, ಕೈ, ತೆನೆ

ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ಯಾಕುಮಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸಾಲಿನಲ್ಲಿ ನಿಂತಿರುವ ಮತದಾರರು.

ಬೆಂಗಳೂರು, ನ. ೩- ಕೊರೊನಾ ಭೀತಿಯ ಮಧ್ಯೆ ರಾಜರಾಜೇಶ್ವರಿ ನಗರ ಮತ್ತು ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಆರಂಭದಲ್ಲಿ ಮಂದಗತಿಯಲ್ಲಿದ್ದ ಮತದಾನ ಬಿಸಿಲೇರುತ್ತಿದ್ದಂತೆ ಚುರುಕುಗೊಂಡಿತ್ತು.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬೆಳಿಗ್ಗೆ ಮತದಾನ ನಿರಸವಾಗಿತ್ತು. ನಂತರ ಮತದಾನ ಚುರುಕುಗೊಂಡು ಮತದಾರರು ಒಬ್ಬೊಬ್ಬರಾಗಿ ಮತಗಟ್ಟೆಗಳತ್ತ ಮುಖಮಾಡಿ ಮತ ಚಲಾಸಿದರು. ಕ್ಷೇತ್ರದ ಯಶವಂತಪುರ, ಲಗ್ಗೇರೆ, ರಾಜರಾಜೇಶ್ವರಿ ಬಡಾವಣೆಗಳಲ್ಲಿ ಮತದಾನ ಬೆಳಿಗ್ಗೆ ೧೧ ಗಂಟೆಯ ನಂತರ ಬಿರುಸುಗೊಂಡಿತು. ಮಧ್ಯಾಹ್ನ ೨ ಗಂಟೆಯ ಹೊತ್ತಿಗೆ ರಾಜರಾಜೇಶ್ವರಿ ನಗರದಲ್ಲಿ ಶೇ. ೩೫ ರಷ್ಟು ಮತದಾನ ಆಗಿತ್ತು.
ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಮತದಾನ ಬೆಳಿಗ್ಗಿನಿಂದಲೇ ಚುರುಕುಗೊಂಡಿದ್ದು, ಮಧ್ಯಾಹ್ನದ ಹೊತ್ತಿಗೆ ಮತದಾನ ಬಿರುಸಾಗಿತ್ತು. ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮತದಾರರು ಮತದಾನಕ್ಕೆ ಹೆಚ್ಚಿನ ಆಸಕ್ತಿ ತೋರಿ ಸರದಿಸಾಲುಗಳಲ್ಲಿ ನಿಂತು ಮತ ಚಲಾಯಿಸಿದ್ದು ಸಾಮಾನ್ಯ ದೃಶ್ಯವಾಗಿತ್ತು.
ಸಿರಾ ಕ್ಷೇತ್ರದಲ್ಲಿ ಮಧ್ಯಾಹ್ನ ೨ ಗಂಟೆಗೆ ಹೊತ್ತಿಗೆ ಶೇ. ೪೫ ರಷ್ಟು ಮತದಾನ ಆಗಿತ್ತು.
ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್. ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ, ಜೆಡಿಎಸ್‌ನ ಕೃಷ್ಣಮೂರ್ತಿ ಸೇರಿದಂತೆ ೧೬ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮತದಾರರು ಇಂದು ಮುದ್ರೆ ಒತ್ತಿದ್ದಾರೆ. ಹಾಗೆಯೇ ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ರಾಜೇಶ್‌ಗೌಡ, ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ, ಜೆಡಿಎಸ್‌ನ ಅಮ್ಮಾಜಮ್ಮ ಸೇರಿದಂತೆ ೧೫ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೂ ಮತದಾರರ ಇಂದು ತನ್ನ ತೀರ್ಪು ನೀಡಿದ್ದು, ಇವರೆಲ್ಲರ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
ಆಡಳಿತರೂಢಾ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲುವುಗಾಗಿ ಮೂರೂ ಪಕ್ಷಗಳ ನಡುವೆ ತೀವ್ರ ಹಣಾಹಣಿ ನಡೆದಿದೆ.

ಶಿರಾ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮತದಾನ ಮಾಡಲು ಸರದಿಸಾಲಿನಲ್ಲಿ ನಿಂತಿರುವ ಮತದಾರರು.


ಮತದಾನ ನಡೆದಿರುವ ಆರ್ ಆರ್ ನಗರ ಮತ್ತು ಸಿರಾ ವಿಧಾನಸಭಾ ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಆರಂಭದಲ್ಲಿ ಮತಯಂತ್ರದ ದೋಷ ಕಾಣಿಸಿಕೊಂಡಿತ್ತು. ನಂತರ ಮತ ಯಂತ್ರಗಳನ್ನು ಬದಲಿಸಿ ಮತದಾನಕ್ಕೆ ವ್ಯವಸ್ಥೆ ಮಾಡಲಾಯಿತು. ಇದರಿಂದ ಇಲ್ಲಿ ಮತದಾನ ವಿಳಂಬವಾಗಿ ಆರಂಭವಾಗಿತ್ತು.
ಮತ ಯಂತ್ರ ದೋಷದ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ಯಾವುದೇ ಗೊಂದಲಗಳಿಲ್ಲದೆ ಮತದಾನ ಸುಗಮವಾಗಿ ನಡೆದಿದೆ.
ಕೊರೊನಾ ಸೋಂಕಿನ ಆತಂಕದ ನಡುವೆಯೇ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸುತ್ತಿದ್ದು, ಕೆಲ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ದೃಶ್ಯ ಸಾಮಾನ್ಯವಾಗಿತ್ತು.
ಪ್ರತಿ ಮತಗಟ್ಟೆಗಳಲ್ಲೂ ಮತದಾರರ ನಡುವೆ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿದ್ದು, ೫ ಅಡಿ ದೂರಕ್ಕೆ ವೃತ್ತಗಳನ್ನು ಹಾಕಿ ಮತದಾರರು ಮತಚಲಾವಣೆಗೆ ನಿಲ್ಲಲು ಅವಕಾಶ ಮಾಡಿಕೊಡಲಾಗಿದೆ.
ಮತದಾನಕ್ಕೆ ಬರುವ ಮತದಾರರು ಮಾಸ್ಕ್ ಧರಿಸಿ, ಮತದಾನ ಮಾಡುವುದು ಕಡ್ಡಾಯವಾಗಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಿಯೇ ಮತ ಚಲಾಯಿಸಿದರು. ಮತದಾನಕ್ಕೆ ಆರ್ ಆರ್ ನಗರ ಕ್ಷೇತ್ರದಲ್ಲಿ ೬೭೮ ಮತಗಟ್ಟೆಗಳನ್ನು ಹಾಗೂ ಸಿರಾದಲ್ಲಿ ೩೩೦ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲೆಡೆ ಮತದಾನ ನಿರಾಂತಕವಾಗಿ ನಡೆದಿದೆ.
ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ಮತಗಟ್ಟೆಗಳಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಮತಗಟ್ಟೆಗಳಲ್ಲೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿ, ಪ್ರತಿ ಮತದಾರರ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ. ಹಾಗೆಯೇ ಮತದಾರರಿಗೆ ಬಲಗೈಗೆ ಗ್ಲೌಸ್ ಧರಿಸಿಯೇ ಪ್ರತಿಯೊಬ್ಬರು ಮತ ಚಲಾವಣೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಇದರ ಜತೆಗೆ ಸ್ಯಾನಿಟೈಸರ್ ವ್ಯವಸ್ಥೆ ಒದಗಿಸಲಾಗಿದೆ.
ಕೊರೊನಾ ಸೋಂಕಿತರಿಗೂ ಮತ ಚಲಾವಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಸಂಜೆ ೫ ರಿಂದ ೬ರ ಒಂದು ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿತರಿಗೆ ಮತ ಚಲಾಯಿಸಲು ಸಮಯ ನಿಗದಿ ಮಾಡಲಾಗಿದ್ದು, ಮತಗಟ್ಟೆಯ ಸಿಬ್ಬಂದಿ ಈ ಸಂದರ್ಭದಲ್ಲಿ ಪಿಪಿ ಇ ಕಿಟ್ ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನಿಂದ ಬರುವ ಸೋಂಕಿತರಿಗೆ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಎರಡೂ ಕ್ಷೇತ್ರಗಳಲ್ಲೂ ಮೊಬೈಲ್ ಜಾಗೃತದಳವನ್ನು ನಿಯೋಜಿಸಲಾಗಿದ್ದು, ಪೊಲೀಸರನ್ನು ಬಂದೋಬಸ್ತ್ ಕಾರ್ಯಗಳಿಗೆ ನಿಯೋಜಿಸಿ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಅಭ್ಯರ್ಥಿಗಳಿಂದ ಪೂಜೆ
ಸಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ಗೌಡ ಮತದಾನಕ್ಕೂ ಮುನ್ನ ಚಿರತನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು ಸಿರಾ ಗ್ರಾಮ ದೇವತೆ ಕೋಟೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಮತ ಹಾಕಿದರು. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಸಹ ದೇವಸ್ಥಾನಕ್ಕೆ ತೆರಳಿದ ನಂತರವೇ ಮತ ಹಾಕಿದರು.
ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಬೆಳಗ್ಗೆಯೇ ಚಿಕ್ಕತಿರುಪತಿಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ ಅವರು ವಿಜಯನಗರದ ಆದಿಚುಂಚನಗಿರಿ ಮಠದ ಶ್ರೀ ಗಂಗಾಧರೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಮತಗಟ್ಟೆಗೆ ಬಂದ ಮತ ಹಾಕಿದರು.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಜ್ಞಾನಭಾರತಿಯ ದೇವಾಲಯಕ್ಕೆ ತೆರಳಿ ನಂತರ ಮತ ಚಲಾಯಿಸಿದರು.
ಮತದಾನ ಬೆಳಿಗ್ಗೆ ೭ ಗಂಟೆಗೆ ಆರಂಭವಾಗಿದ್ದು, ಸಂಜೆ ೬ರ ವರೆಗೂ ಮತದಾನಕ್ಕೆ ಅವಕಾಶವಿದೆ.