ಯಾರು ಹಿತವರು ಈ ಮೂವರೊಳಗೆ..?

 • ಎಂ. ರಮೇಶ್ ಚಿ. ಸಾರಂಗಿ
  ತುಮಕೂರು, ಅ. ೩೦- ಗುಂಡ್ಲುಪೇಟೆ ಮತ್ತು ಕೆ.ಆರ್. ಪೇಟೆಯ ನಂತರ ಇಡೀ ರಾಜ್ಯದ ಗಮನ ಸೆಳೆದಿರುವ ಸಿರಾ ಉಪಚುನಾವಣಾ ಅಖಾಡ ಮತದಾನದ ದಿನ ಸನ್ನಿಹಿತವಾಗುತ್ತಿರುವಂತೆಯೇ ಕಾವೇರಿದ್ದು, ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಗೆಲುವಿಗಾಗಿ ಭಾರೀ ಪೈಪೋಟಿಯೇ ನಡೆದಿದೆ.
  ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿದ್ದ ಕೋಟೆನಾಡಿನಲ್ಲೀಗ ಶತಾಯ-ಗತಾಯ ಕಮಲ ಅರಳಿಸಲೇಬೇಕೆಂಬ ಹಠಕ್ಕೆ ಬಿಜೆಪಿ ನಾಯಕರು ಬಿದ್ದಿರುವುದರಿಂದ ಮೂರೂ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
  ಕೋಟೆನಾಡು ಸಿರಾ ಅಖಾಡ ಅಕ್ಷರಶಃ ಮೂರು ರಾಜಕೀಯ ಪಕ್ಷಗಳ ನಾಯಕರ ಯುದ್ಧ ಭೂಮಿಯಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಜಿದ್ದಾಜಿದ್ದಿನ ಹೋರಾಟ ನಡೆಸಿದ್ದಾರೆ.
  ಆಡಳಿತಾ ರೂಢ ಬಿಜೆಪಿ ಪಕ್ಷದಿಂದ ಡಾ. ರಾಜೇಶ್‌ಗೌಡ, ಕಾಂಗ್ರೆಸ್‌ನಿಂದ ಟಿ.ಬಿ. ಜಯಚಂದ್ರ ಹಾಗೂ ಜೆಡಿಎಸ್‌ನಿಂದ ಅಮ್ಮಾಜಮ್ಮ ಸತ್ಯನಾರಾಯಣ ಅವರು ಚುನಾವಣಾ ಅಖಾಡದಲ್ಲಿದ್ದಾರೆ. ಈ ಮೂವರು ಹುರಿಯಾಳುಗಳ ಪೈಕಿ ಕಾಂಗ್ರೆಸ್‌ನ ಜಯಚಂದ್ರ ಹಳೇ ಮುಖವಾಗಿದ್ದು, ಜೆಡಿಎಸ್‌ನ ಅಮ್ಮಾಜಮ್ಮ ಸತ್ಯನಾರಾಯಣ ಅವರ ಪತ್ನಿಯಾಗಿರುವುದರಿಂದ ಕ್ಷೇತ್ರದ ಜನರಿಗೆ ಚಿರಪರಿಚಿತರು, ಆದರೆ ವೈದ್ಯಕೀಯ ವೃತ್ತಿಯ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಡಾ. ರಾಜೇಶ್‌ಗೌಡ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಪಕ್ಷದಿಂದ ಚುನಾವಣಾ ಕಣಕ್ಕೆ ಧುಮುಕಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
  ಚುನಾವಣಾ ಕಣದಲ್ಲಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಹುರಿಯಾಳುಗಳು ಪ್ರಬಲ ಸಮುದಾಯವಾದ ಕುಂಚಿಟಿಗ ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿರುವುದರಿಂದ ಈ ಉಪಚುನಾವಣೆ ಭಾರೀ ಮಹತ್ವ ಪಡೆದುಕೊಂಡಿದೆ.
  ಸಿರಾ ವಿಧಾನಸಭಾ ಕ್ಷೇತ್ರ ಹಿಂದೆಂದೂ ಕಂಡರಿಯದಂತಹ ರಾಜಕೀಯ ಯುದ್ಧಕ್ಕೆ ಸಾಕ್ಷಿಯಾಗಿದ್ದು, ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
  ಉಪಸಮರ ಅಂತಿಮ ಘಟ್ಟಕ್ಕೆ ಬರುತ್ತಿದ್ದಂತೆಯೇ ಸಿರಾ ಅಖಾಡ ಮತ್ತಷ್ಟು ರಂಗೇರಿದ್ದು, ಈಗಾಗಲೇ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಆರ್. ರಾಜೇಂದ್ರ ಸೇರಿದಂತೆ ಎಲ್ಲ ಹಿರಿಯ ನಾಯಕರುಗಳು ಕ್ಷೇತ್ರದಲ್ಲಿ ಮತ ಬೇಟೆ ನಡೆಸಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದಾರೆ.
  ಇನ್ನು ದಳಪತಿಗಳು ಕ್ಷೇತ್ರವನ್ನು ಉಳಿಸಿಕೊಳ್ಳಲು ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಹೆಣೆಯುತ್ತಾ ಭಾರೀ ಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿರುವ ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅವರು ಸಿರಾ ಕ್ಷೇತ್ರದಾದ್ಯಂತ ಸಂಚರಿಸಿ ಸತ್ಯನಾರಾಯಣ ಅವರ ಮೇಲಿನ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
  ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವರುಗಳು, ರಾಜ್ಯಾಧ್ಯಕ್ಷರು, ಶಾಸಕರುಗಳು ಪ್ರತಿದಿನವೂ ಎಡತಾಕುತ್ತಿದ್ದು, ೭೦ ವರ್ಷಗಳ ಬಳಿಕ ಕೋಟೆನಾಡಿನಲ್ಲಿ ಕಮಲ ಅರಳಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ.
  ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಅರಳಲು ಕಾರಣಕರ್ತರಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಸಿರಾ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಸಂಘಟನೆಯ ಜತೆಗೆ ಉಪಚುನಾವಣೆ ಗೆಲುವಿಗೆ ರಣತಂತ್ರಗಳನ್ನು ರೂಪಿಸಿರುವುದೂ ಸಹ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂಬ ಮಾತುಗಳು ಕ್ಷೇತ್ರದಾದ್ಯಂತ ಕೇಳಿ ಬರುತ್ತಿವೆ.
  ಸಿರಾ ಕ್ಷೇತ್ರದಲ್ಲಿ ಪ್ರಬಲ ಮತದಾರರಾಗಿರುವ ಕುಂಚಿಟಿಗ ಒಕ್ಕಲಿಗರು ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ಬಾರಿ ಯಾರ ಕಡೆಗೆ ಒಲವು ತೋರುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಎಡೆಮಾಡಿದೆ.
  ೨೦೧೮ ರಲ್ಲಿ ಜೆಡಿಎಸ್‌ನ ಸತ್ಯನಾರಾಯಣ ಅವರ ವಿರುದ್ಧ ಸೋಲನುಭವಿಸಿದ್ದ ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಅವರಿಗೆ ಈ ಉಪಚುನಾವಣೆ ಅಗ್ನಿಪರೀಕ್ಷೆಯಾಗಿದ್ದರೆ, ಜೆಡಿಎಸ್‌ನ ಅಮ್ಮಾಜಮ್ಮ ಅವರಿಗೆ ಅನುಕಂಪದ ಅಲೆಯೇ ಬಂಡವಾಳವಾಗಿದೆ. ಇನ್ನು ಆಡಳಿತಾರೂಢ ಬಿಜೆಪಿಗೆ ಮೊದಲ ಬಾರಿಗೆ ಖಾತೆ ತೆರೆಯಲೇಬೇಕು ಎಂಬ ಪ್ರತಿಷ್ಠೆ ಇದೀಗ ಎದುರಾಗಿದೆ.