ಯಾರು ಪಕ್ಷ ಬಿಡಲ್ಲ:ಬಿಎಸ್‌ವೈ

ಯಾದಗಿರಿ,ಮಾ.೮-ಯಾರು ಕೂಡ ಬಿಜೆಪಿ ಬಿಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಸಚಿವಾರದ ವಿ.ಸೋಮಣ್ಣ ಹಾಗೂ ನಾರಾಯಣಗೌಡ ಪಕ್ಷ ತೊರೆಯುತ್ತಾರೆ ಎಂಬ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪರವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಯಾದಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ತಾವು ಬೆಂಗಳೂರಿಗೆ ವಾಪಾಸ್ ಆದ ನಂತರ ಸೋಮಣ್ಣ ಮತ್ತು ನಾರಾಯಣಗೌಡರವರ ಜೊತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು. ಆದರೆ, ಪಕ್ಷ ಬಿಡುತ್ತಾರೆ ಎಂಬ ವಿಚಾರದಲ್ಲಿ ಸತ್ಯಾಂಶವಿಲ್ಲವೆಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಗೇಲಿ ಮಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ತಾವೇ ಅಧಿಕಾರಕ್ಕೆ ಬರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಾವೇನು ಟೀಕೆ ಮಾಡುವುದಿಲ್ಲ ಎಂದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಇದನ್ನು ಗಮನಿಸದರೆ ವಿಜಯೋತ್ಸವ ಆಚರಣೆಗೆ ಬರುತ್ತಿದ್ದಾರೆ ಎಂದು ಭಾಸವಾಗುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬಿಜೆಪಿಯೇ ಸರ್ಕಾರ ರಚನೆ ಮಾಡಲಿದೆ. ಈ ವಿಚಾರದಲ್ಲಿ ಸಂಶಯ ಬೇಡ ಮುಖ್ಯಮಂತ್ರಿಯಾಗುವುದಾಗಿ ಕಾಂಗ್ರೆಸ್‌ನವರು ಕನಸು ಕಾಣುತ್ತಿದ್ದಾರೆ. ಇದು ನನಗಸಾಗುವುದಿಲ್ಲ ಎಂದು ಹೇಳಿದರು.