ಯಾರು ಕಮಿಷನ್ ಕೇಳಿಲ್ಲ: ಕೆಂಪಣ್ಣ

ಬೆಂಗಳೂರು, ಆ. ೧೧- ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ, ಯಾವುದೇ ಸಚಿವರು ಕಮಿಷನ್ ಕೇಳಿಲ್ಲ. ಈ ಬಗ್ಗೆ ಮಾಹಿತಿ ಬಂದಿದ್ದು ಆದರೆ, ಯಾವುದೇ ಗುತ್ತಿಗೆದಾರರು ತಮ್ಮ ಬಳಿ ದೂರು ಹೇಳಿಲ್ಲ. ಮೂರನೇ ವ್ಯಕ್ತಿ ಆರೋಪ ಮಾಡಿರುವುದಾಗಿ ಹೇಳಿದ್ದಾರೆ. ಸರ್ಕಾರದಿಂದ ೨೫ ಸಾವಿರ ಕೋಟಿ ರೂ. ಬಾಕಿ ಹಣ ಬರಬೇಕಾಗಿದ್ದು, ೭ ತಿಂಗಳಿನಿಂದ ಹಣ ಬಾಕಿ ಉಳಿದಿದೆ. ಆ. ೩೧ ರೊಳಗೆ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಕೆಂಪಣ್ಣ ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ಕಾಮಗಾರಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಹಣ ಭಾಗ್ಯ ಕೊಡಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೩ ತಿಂಗಳಾದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆಯೂ ಮುಖ್ಯಮಂತ್ರಿಗೆ ಹಣ ಪಾವತಿಗೆ ಮನವಿ ಸಲ್ಲಿಸಿದ್ದೇವೆ. ಅವರು ಈ ವೇಳೆ ಎಷ್ಟು ತಿಂಗಳು ಬಾಕಿಯಿದೆ ಎಂದು ಹೇಳಿದ್ದೇವು. ಅದಕ್ಕೆ ೩ ವರ್ಷದಿಂದ ಬಾಕಿ ಉಳಿದಿದೆ ಎಂದು ವಿವರಿಸಿದ್ದೇವೆ. ತಾವು ಅಧಿಕಾರಕ್ಕೆ ಬಂದು ೩ ತಿಂಗಳಾಗಿದೆ. ಹಣ ಪಾವತಿಗಾಗಿ ಗುತ್ತಿಗೆ ಮೇಲೆ ಕುಳಿತಿದ್ದೀರಾ ಎಂದಿದ್ದರು. ಆಗ ಬಾಕಿ ಹಣ ಪಾವತಿಯಾಗದಿದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾಗಿ ಹೇಳಿದರು. ಬಾಕಿ ಬಿಲ್ ಪಾವತಿ ಕೋರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮನವಿ ಪತ್ರ ನೀಡಲಾಗಿತ್ತು. ಆದಾದ ಬಳಿಕ ಪ್ರಧಾನಿ ನರೇಂದ್ರ ಮೋದಿಗೂ ಮನವಿ ಪತ್ರ ಕೊಟ್ಟಿದ್ದೇವೆ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ತಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದರು. ಎಸ್‌ಐ ತನಿಖೆ ಬೇಡ ೪ ವರ್ಷದ ಹಳೆಯ ಕಾಮಗಾರಿಯ ಬಗ್ಗೆ ಎಸ್‌ಐ ತನಿಖೆ ಮಾಡುವುದು ಬೇಡ ಎಂದು ಕೆಂಪಣ್ಣ ಮನವಿ ಮಾಡಿದರು. ಗುತ್ತಿಗೆದಾರರು ಟೆಂಡರ್‌ಗಳ ಮೂಲಕ ಗುತ್ತಿಗೆ ಪಡೆದಿದ್ದಾರೆ. ಆದ್ದರಿಂದ ಎಸ್ ಐ ತನಿಖೆ ಮಾಡುವ ಅಗತ್ಯವಿಲ್ಲ ಎಂದರು. ಗುತ್ತಿಗೆದಾರರಿಗೆ ರಾಜ್ಯ ಸರ್ಕಾರದಿಂದ ೨೫ ಸಾವಿರ ಕೋಟಿ ರೂ. ಬಾಕಿ ಉಳಿದಿವೆ. ಹಣ ಬಿಡುಗಡೆಗೆ ಆ. ೩೧ರವರೆಗೆ ಸಮಯ ನೀಡುತ್ತೇವೆ. ಅಷ್ಟರೊಳಗಾಗಿ ಪಾವತಿ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಕೆಂಪಣ್ಣ ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಶೇ. ೪೦ ರಷ್ಟು ಕಮಿಷನ್ ಆರೋಪ ಮಾಡಿರುವ ಬಗ್ಗೆ ತಮ್ಮ ಬಳಿ ದಾಖಲೆಯಿದೆ. ಕೋರ್ಟ್‌ನಲ್ಲಿ ಎಲ್ಲವೂ ನೀಡುತ್ತೇನೆ. ಕಾಂಗ್ರೆಸ್ ಸರ್ಕಾರ ವಿರುದ್ಧ ಶೇ. ೧೫ ರಷ್ಟು ಕಮಿಷನ್ ಕೊಡುವಂತೆ ಬಿಬಿಎಂಪಿ ಗುತ್ತಿಗೆದಾರ ಮಾಡಿರುವ ಆರೋಪಕ್ಕೆ ದಾಖಲೆ ನೀಡಬೇಕು ಎಂದು ಹೇಳಿದರು. ಉದ್ದೇಶ ಪೂರ್ವಕವಾಗಿ ಬಿಬಿಎಂಪಿ ಗುತ್ತಿಗೆದಾರರು ಗೊಂದಲ ಸೃಷ್ಟಿಸುತ್ತಿದ್ದಾರೆ.

ವಿರೋಧ ಪಕ್ಷ ನಾಯಕನಿದ್ದರೆ ಅವರ ತೆರಳಿ ಚರ್ಚೆ ನಡೆಸಬಹುದಾಗಿತ್ತು. ಆದರೆ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲದಿರುವಾಗ ಆ ಪಕ್ಷ ನಾಯಕರನ್ನು ಭೇಟಿಯಾಗುವ ಔಚಿತ್ಯವೇನೀತ್ತು ಎಂದು ಪ್ರಶ್ನಿಸಿದರು. ಕಾರಜೋಳ ವಿರುದ್ಧ ಆಕ್ರೋಶ ತಾವು ನಾಪತ್ತೆಯಾಗಿರುವ ಬಗ್ಗೆ ಮಾಜಿ ಸಚಿವ ಗೋವಿಂದ ಕಾರಜೋಳ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಎಲ್ಲೂ ಹೋಗಿಲ್ಲ. ಇಲ್ಲಿ ಇದ್ದೇನೆ. ನನಗೆ ೮೩ ವರ್ಷ ವಯಸ್ಸಾಗಿದೆ. ಕಾರಚೋಳ ಮತ್ತು ತಾವು ಇಬ್ಬರು ಸ್ಟೋರ್ ಕಿಪರ್ ಆಗಿದ್ದೇವು. ನೀರಾವರಿ ಇಲಾಖೆಯ ಅವ್ಯವಹಾರ ಪ್ರಸ್ತಾಪಿಸಿದರೆ ಅವರು ಏನು ಎಂದು ತಿಳಿಯಲಿದೆ ಎಂದು ತಿರುಗೇಟು ನೀಡಿದರು. ನೀರಾವರಿ ನಿಗಮ ಇಲಾಖೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದೆ. ೭-೮ ವರ್ಷಗಳಿಂದ ಮಲ್ಲಿಕಾರ್ಜುನ್ ಗುಂಗೆ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ಮಲ್ಲಿಕಾರ್ಜುನ್ ಮತ್ತು ಕಾರಜೋಳ ಅವರಿಗೆ ಒಳ್ಳೆಯ ಸಂಬಂಧವಿದೆ. ಈ ಬಗ್ಗೆ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.