ಯಾರಿಗೆ ಟಿಕಟ್ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡಿ: ಸಂತೋಷ್

ಕೋಲಾರ,ಜ,೨೧-ಮುಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಕಾರ್ಯಕರ್ತರೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕರೆ ನೀಡಿದರು.
ನಗರ ಹೊರವಲಯದ ರತ್ನ ಕನ್ವೇಷನ್ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಪಕ್ಷವು ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿ
ಬಿಜೆಪಿ ಪಕ್ಷದ ಪರವಾಗಿ ಅಕಾಂಕ್ಷಿಗಳಿಗೆ ಅನಧಿಕೃತವಾಗಿ ಟಿಕೆಟ್ ಘೋಷಣೆ ಮಾಡುವುದಾಗಲಿ, ಆಣೆ, ಪ್ರಮಾಣ ಮಾಡುವುದಾಗಲಿ ಯಾರೂ ಮಾಡಬಾರದು, ಚುನಾವಣೆ ಟಿಕೆಟ್ ಹಂಚಿಕೆಯು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮಿತಿಗಳಿಂದ ಅಧಿಕೃತವಾಗಿ ಘೋಷಣೆ ಮಾಡಲಾಗುವುದು. ಯಾರೂ ಸಹ ಕೊನೆಯವರೆಗೂ ಅಕಾಂಕ್ಷಿಗಳಿಗೆ ಆಶ್ವಾಸನೆಗಳು, ಭರವಸೆಗಳು ನೀಡಬಾರದು ಎಂದರು,
ಬಿಜೆಪಿ ಪಕ್ಷದಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ಅಂಥವರ ಪರವಾಗಿ ಜನರ ಅಭಿಪ್ರಾಯ ಸಂಗ್ರಹಿಸಿಕೊಂಡು ಟಿಕೆಟ್ ನೀಡಲಾಗುತ್ತದೆ. ಪಕ್ಷದಲ್ಲಿ ಟಿಕೆಟ್ ಕೊಡುವುದಾಗಿ ಯಾರೂ ಸಹಾ ಪ್ರಮಾಣ ಮಾಡಿ ಅಕಾಂಕ್ಷಿಗಳನ್ನು ಕರೆತರುವವರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದು, ಪಕ್ಷದಿಂದ ಅಧಿಕೃತವಾಗಿ ಯಾರಿಗೆ ಟಿಕೆಟ್ ನೀಡುತ್ತಾರೋ ಅವರಿಗೆ ಕೆಲಸ ಮಾಡುವುದು ಕಾರ್ಯಕರ್ತರ ಕೆಲಸವಾಗಿದೆ ಎಂದು ಸಂತೋಜೀ ಕಾರ್ಯಕರ್ತರ ಗಮನಕ್ಕೆ ತಂದರು.
ಇತರೇ ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪಕ್ಷವನ್ನು ಸಂಘಟನೆ ಮಾಡಬೇಕು.ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಒಟ್ಟಾಗಿ ಸಂಘಟಿಸುವ ಕೆಲಸ ಮಾಡುವ ಮೂಲಕ ೬ ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸಬೇಕು, ಪಕ್ಷದ ಸಂಘಟನೆಗಾಗಿ ಯಾರು ಕೆಲಸ ಮಾಡುತ್ತಾರೋ ಹಾಗೂ ಸಂಘಟನೆ ಮಾಡುವವರಿಗೆ ಪಕ್ಷದಿಂದ ಟಿಕೆಟ್ ನೀಡಲಾಗುವುದು, ಯಾವೂದೇ ವ್ಯಕ್ತಿಗೆ ಟಿಕೆಟ್ ನೀಡಿದರೂ ಏನೋಂದು ಪ್ರಶ್ನಿಸದೆ ಶಿಸ್ತನ್ನು ಕಾಪಾಡಿ ಕೊಂಡು ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು ಗುಂಪುಗಾರಿಕೆ ಮಾಡಬಾರದು, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಿದ್ದಾಂತವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ತಾವು ಸಭೆಗೆ ಬರುವ ಸಂದರ್ಭದಲ್ಲಿ ಮಾರ್ಗದ ಮಧ್ಯೆ ಸ್ವಾಗತ ಕೋರುವ ಸ್ವಾಗತ ಕಮಾನುಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸುವುದು ಇವೆಲ್ಲಾವು ನಮ್ಮ ಪಕ್ಷದ ಸಂಸ್ಕೃತಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಸಿಎಂ ಅಥವಾ ಸಚಿವರು ಬಂದರೆ ಪಟಾಕಿ ಹಚ್ಚುವುದು ಹಾಗೂ ಸ್ವಾಗತ ಕೋರುವ ಕಮಾನುಗಳನ್ನು ಅಳವಡಿಸುವುದು ಸರಿ ಆದರೆ ನಾವು ಸಂಘಟನೆಯವರು ನಾವು ಬಂದಾಗ ಪಟಾಕಿ ಹಚ್ಚುವುದು ಹಾಗೂ ಸ್ವಾಗತ ಕಮಾನುಗಳನ್ನು ಅಳವಡಿಸುವುದು ಸರಿಯಲ್ಲ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.