ಕೋಲಾರ,ಏ,೨೮-ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ನೇರವಾಗಿ ಬೆಂಬಲಿಸಿದ ಕೊತ್ತೂರು ಮಂಜುನಾಥ್‌ರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿದ್ದು ನಮ್ಮಂತ ಎಷ್ಟೋ ಜನ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾರನ್ನು ಬೆಂಬಲಿಸಬೇಕು ಅಂತ ಗೊಂದಲದಲ್ಲಿ ಇದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರ್ ರಿಪಬ್ಲಿಕ್ ಫೌಂಡೇಶನ್ ಅಧ್ಯಕ್ಷ ಅರೀಪುಲ್ಲಾ ಖಾನ್ ತಿಳಿಸಿದರು
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ನಾವು ಬೇರೆ ಪಕ್ಷಗಳನ್ನು ಬೆಂಬಲಿಸಿ ಬಂದರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡುತ್ತದೆಯೇ ಎಂದು ಹೈಕಮಾಂಡ್ ಉತ್ತರ ಕೊಡಲಿ. ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹಾಗೂ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಅವರು ಯಾವುದೇ ಸ್ಪಷ್ಟವಾದ ಸೂಚನೆ ನೀಡಲ್ಲ, ಅದರಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಗೊಂದಲದಲ್ಲಿ ಇದ್ದು ಮುಸ್ಲಿಂ ಸಮುದಾಯವು ಮುಂದೆ ಚರ್ಚೆ ಮಾಡಿ ಜೆಡಿಎಸ್, ಬಿಜೆಪಿ ಹಾಗೂ ನೋಟಾಗೆ ಹಾಕಲು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಪ್ರತಿಯೊಂದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಮುಸ್ಲಿಂ ಸಮುದಾಯವಾಗಿದ್ದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ಸ್ಪರ್ಧೆ ಮಾಡಲು ಅವಕಾಶ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಮುಸ್ಲಿಂ ಸಮುದಾಯವನ್ನು ಕೇವಲ ಓಟು ಬ್ಯಾಂಕ್ ಗಾಗಿ ನಮ್ಮನ್ನು ಬಳಸಿಕೊಳ್ಳುತ್ತಾ ಇದ್ದು ಇತ್ತೀಚೆಗೆ ಕೊತ್ತೂರು ಮಂಜುನಾಥ್ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದು ನಾನೇ ಅಂತ ಹೇಳಿದ್ದು ಅಲ್ಲದೇ, ಅದು ನನ್ನ ತಾಕತ್ತು ಅಂತಾರೆ ,ಮುಂದೆ ನಡೆಯುವ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ತಾಕತ್ತು ಏನೆಂಬುವುದನ್ನು ತೋರಿಸುತ್ತೇವೆ ಎಂದರು.
ರಿಯಾಜ್ ಪಾಷ, ಮಹಮದ್, ಮೆಹಬೂಬ್, ನವಾಜ್ ಇದ್ದರು.