ಯಾನಾಗುಂದಿಯಲ್ಲಿ ಮಾತಾ ಮಾಣಿಕೇಶ್ವರಿ ದೇವಿ 3ನೇ ಆರಾಧನಾ ಮಹೋತ್ಸವ

ಕಲಬುರಗಿ :ಮಾ.01: ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಮಾಣಿಕೇಶ್ವರಿ ಬೆಟ್ಟದಲ್ಲಿ ಇದೇ ಮಾರ್ಚ್ 5ರಿಂದ 7ರವರೆಗೆ ಮಹಾಯೋಗಿನಿ ರೂಪ ರಹಿತ ಅಹಿಂಸಾ ಯೋಗೇಶ್ವರ್ ವೀರ ಧರ್ಮಜ ಮಾತಾ ಮಾಣಿಕೇಶ್ವರಿ ಮಾತೆಯ ಮೂರನೇ ಆರೋಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರೂಪ ಶ್ರೀ ರೂಪ ರಹಿತ ಅಹಿಂಸಾ ಯೋಗೇಶ್ವರ್ ವೀರಧರ್ಮಜ ಮಾತಾಜಿ ಟ್ರಸ್ಟ್ ಸದಸ್ಯ ಸಿದ್ರಾಮಪ್ಪ ಸಣ್ಣೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕೇವಲ ಕರ್ನಾಟಕ ಮಾತ್ರವಲ್ಲದೇ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ್ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಹ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುವರು ಎಂದರು.
ಮಾರ್ಚ್ 5ರಂದು ಬೆಳಿಗ್ಗೆ 9 ಗಂಟೆಗೆ ಅಭಿಷೇಕ, 10 ಗಂಟೆಗೆ ಮಾತಾಜಿಯವರ ನಾಮಸ್ಮರಣೆ, 11 ಗಂಟೆಗೆ ಸತ್ಸಂಗ ಹಾಗೂ ರಾತ್ರಿ 9 ಗಂಟೆಗೆ ಭಜನಾ ಕಾರ್ಯಕ್ರಮಗಳು ಸೇರಿದಂತೆ ಸಂಕಲ್ಪ ನಿವಾರಣೆಯಾಗುವ ಕಾರ್ಯಕ್ರಮ ಜರುಗಲಿವೆ ಎಂದು ಅವರು ಹೇಳಿದರು.
ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಭಕ್ತರಿಗೂ ಮಹಾದಾಸೋಹ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ ಎಂದು ತಿಳಿಸಿದ ಅವರು, ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಕೋರಿದರು.