
ಕೋಲಾರ,ಸೆ,13- ಸಮುದಾಯ ಒಗ್ಗೂಡದಿದ್ದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ, ಶ್ರೀಕೃಷ್ಣ ಜಯಂತಿ ಯಾದವ ಸಮುದಾಯದ ಸಂಘಟನೆಗೆ ಸಾಕಾರವಾಗಲಿ ಎಂದು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ ಕರೆ ನೀಡಿದರು.
ಜಿಲ್ಲಾಡಳಿತ,ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಯಾದವ ಸಂಘದ ಸಹಯೋಗದಲ್ಲಿ ನಡೆದ ಶ್ರೀಕೃಷ್ಣಜಯಂತಿಯ ಸ್ಥಬ್ದಚಿತ್ರಗಳು,ಪಲ್ಲಕ್ಕಿಗಳ ಭವ್ಯ ಮೆರವಣಿಗೆಗೆ ಯಾದವ ಸಮುದಾಯದ ಭವನದ ಮುಂಭಾಗ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಯಾದವ ಸಮುದಾಯದಲ್ಲಿ ಸಂಘಟನೆ ಕೊರತೆ ಇದೆ, ಸಮುದಾಯದ ಯುವಕರು ಮುಂಚೂಣಿಗೆ ಬರಬೇಕು ಸಂಘಟನೆಯನ್ನು ಬಲಗೊಳಿಸಬೇಕು ಎಂದು ಕಿವಿಮಾತು ಹೇಳಿ, ಭಿನ್ನಮತ ತೊರೆದು ಎಲ್ಲರೂ ಒಂದಾಗೋಣ ಸಮುದಾಯಕ್ಕಾಗುತ್ತಿರುವ ಅನ್ಯಾಯದ ವಿರುದ್ದ ಹೋರಾಡೋಣ ಎಂದರು.
ಗೋವುಗಳನ್ನು ಸಾಕುವ ಯಾದವರು, ಕುರಿ ಸಾಕುವ ಕುರುಬರು ಒಂದೇ ಸಮುದಾಯವಾಗಿದ್ದು, ಒಗ್ಗಟ್ಟಿನಿಂದ ಇರಬೇಕು, ಹಿಂದುಳಿದ ವರ್ಗಗಳು ಒಂದಾಗದಿದ್ದರೆ ರಾಜಕೀಯ ಅಧಿಕಾರದಿಂದಲೂ ವಂಚಿತರಾಗಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಹೈನೋದ್ಯಮವೇ ಜೀವಾಳವಾಗಿದೆ, ಅದರಲ್ಲೂ ಯಾದವ ಸಮುದಾಯ ಪೂರ್ಣವಾಗಿ ಹೈನುಗಾರಿಕೆಯನ್ನೇ ನಂಬಿದೆ, ಗೋವನ್ನು ಗೋಮಾತೆಯೆಂದು ಪೂಜಿಸುವ ಸಂಸ್ಕೃತಿ ಮೈಗೂಡಿಸಿಕೊಂಡಿದೆ ಎಂದು ತಿಳಿಸಿದರು.
ಸಮಾಜಕ್ಕೆ ಭಗವದ್ಗೀತೆಯಂತಹ ಮಹಾನ್ ಗ್ರಂಥ ನೀಡುವ ಮೂಲಕ ಸಂಸ್ಕಾರದ ಪಾಠ ಹೇಳಿಕೊಟ್ಟ ಶ್ರೀಕೃಷ್ಣ ಪರಮಾತ್ರ ಎಲ್ಲರಿಗೂ ದೇವರೇ ಎಂದು ತಿಳಿಸಿ, ಕೃಷ್ಣಜಯಂತಿಯ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಮಳೆ,ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.
ಶ್ರೀಕೃಷ್ಣನ ಭವ್ಯ ಮೆರವಣಿಗೆಗೆ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರಗು ನೀಡಿದ್ದವು.
ಮಾಜಸೇವಕ ಸಿಎಂಆರ್ ಶ್ರೀನಾಥ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್, ಬಣಕನಹಳ್ಳಿ ನಟರಾಜ್, ಸುಧಾಕರ್,ನಗರಸಭಾ ಸದಸ್ಯರಾದ ಮಂಜುನಾಥ್,ಯಾದವ ಸಂಘದ ನಿಕಟಪೂರ್ವ ಅಧ್ಯಕ್ಷ ಗೋಕುಲ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಇತರರು ಇದ್ದರು.