
ಚಿಕ್ಕನಾಯಕನಹಳ್ಳಿ, ಜು. ೨೩- ತಳ ಸಮುದಾಯಗಳಲ್ಲಿ ಅದರಲ್ಲೂ ಯಾದವ ಸಮುದಾಯಗಳಲ್ಲಿ ಮುಟ್ಟಾದ ಹೆಣ್ಣು ಮಕ್ಕಳನ್ನು ಗ್ರಾಮದಿಂದ ಅಚೆ ಇಡುವ ಪದ್ದತಿ ಈಗಲೂ ಜಾರಿಯಲ್ಲಿದೆ. ಈ ಪದ್ದತಿಯನ್ನು ಹೋಗಲಾಡಿಸಿ, ಈ ಸಮುದಾಯದ ಏಳ್ಗೆಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಹೊನ್ನಪ್ಪ ಹೇಳಿದರು.
ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮಪ್ಪನಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತುಮಕೂರು, ತಾಲ್ಲೂಕು ಅಡಳಿತ, ತಾಲ್ಲೂಕು ಪಂಚಾಯಿತಿ, ಶಿಶು ಅಭಿವೃದ್ಧಿ ಯೋಜನೆ, ಅರಕ್ಷಕ ಇಲಾಖೆ, ಚೈತನ್ಯ ತರೂರ್ ಪೋರಂ ತಿಪಟೂರು, ತಾಲ್ಲೂಕು ಆರೋಗ್ಯ ಇಲಾಖೆ, ಚಿಕ್ಕನಾಯಕನಹಳ್ಳಿ ಹಾಗೂ ಕಂದಿಕೆರೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಮೌಢ್ಯಾಚರಣೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಟ್ಟಾದ ಹೆಣ್ಣು ಮಕ್ಕಳನ್ನು ಗ್ರಾಮದಿಂದ ಅಚೆ ಇಡುವುದರಿಂದ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಾರೆ. ವಿಷಜಂತುಗಳಿಂದ, ಸಾವು ಹಾಗೂ ಕೆಲವು ದೃಷ್ಟರಿಂದ ಅತ್ಯಾಚಾರವಾಗುವ ಸಂಭವವಿರುತ್ತದೆ. ಈಗಾಗಲೇ ಯಾದವ ಸಮುದಾಯವು ಅರ್ಥಿಕವಾಗಿ ಸದೃಢರಾಗಿದ್ದು, ಸಾಮಾಜಿಕವಾಗಿ ಸಧೃಢರಾಗಿ ಈ ರೀತಿಯ ಪದ್ದತಿಗಳನ್ನು ಕೈಬಿಡುವುದು ಉತ್ತಮ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಪೌಷ್ಟಿಕಾಂಶಯುಕ್ತ ಅಹಾರದ ಜ್ಞಾನ ಅತಿಮುಖ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಾಗರಾಜು ಬಿ.ಜಿ.ಮಾತನಾಡಿ, ನಮ್ಮ ಹಳ್ಳಿಗಾಡಿನಲ್ಲಿ ಒಕ್ಕಲುತನ, ಹೈನುಗಾರಿಕೆ, ಕುರಿ ಸಾಕಾಣಿಕೆ ಹೆಚ್ಚಾಗಿ ಉಳಿದಿರುವುದೇ ಗೊಲ್ಲ ಸಮುದಾಯದಲ್ಲಿ. ಈ ಸಮಾಜದಲ್ಲಿನ ಹೆಣ್ಣು ಮಕ್ಕಳ ಶಿಕ್ಷಣ, ಅರೋಗ್ಯದ ಅರಿವು, ರಕ್ಷಣೆ ಅತ್ಯಂತ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ವಂಸತ್ಕುಮಾರ್, ತಾಲ್ಲೂಕು ವೃತ್ತ ನೀರಿಕ್ಷಕಿ ನಿರ್ಮಲ, ಕಂದಿಕೆರೆ ಗ್ರಾಮ ಪಂಚಾಯಿತಿ ಸದಸ್ಯ ವಸಂತ್, ಕಂದಿಕೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಮಣ್ಣ , ಹಿಂದುಳಿದ ವರ್ಗಗಗಳ ಇಲಾಖೆಯ ಪುಷ್ಟ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ನಾಗರಾಜು, ವಿಶ್ವನಾಥ್, ಮಂಜುನಾಥ್, ಶಿಶು ಆಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕರಾದ ಅನಸೂಯಮ್ಮ, ಶಾರದಮ್ಮ, ರಮ್ಯಾರಾಣಿ, ಸೌಮ್ಯ, ರೇಖಾ ಬಿ., ಪೋಷಣ್ ಅಭಿಯಾನ ಯೋಜನೆಯ ಸಂತೋಷ್ಕುಮಾರ್ ಎಂ. ಜಿ., ಮತ್ತಿತರರು ಉಪಸ್ಥಿತರಿದ್ದರು.