ಯಾದಗಿರಿ ಜಿಲ್ಲೆಯಲ್ಲಿ ಬರಗಾಲ ಘೋಷಣೆ ಹಿನ್ನೆಲೆ:ಜಿಲ್ಲೆಯ 1,04,492 ರೈತರ ಖಾತೆಗೆ ಒಟ್ಟು 112.84 ಕೋಟಿ ರೂ.ಗಳನ್ನು ಜಮೆ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

ಯಾದಗಿರಿ : ಮೇ 15 : ಯಾದಗಿರಿ ಜಿಲ್ಲೆಯನ್ನು ಬರಗಾಲ ಬರಪೀಡಿತ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ 1,04,492 ರೈತರ ಖಾತೆಗೆ ಎರಡು ಹಂತಗಳಲ್ಲಿ ಡಿ.ಬಿ.ಟಿ ಮೂಲಕ ಒಟ್ಟು 112.84 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.

 2023-24 ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲಾ 06 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರಕಾರವು ಘೋಷಣೆ ಮಾಡಿದೆ.
 ಮುಂಗಾರು ಹಂಗಾಮಿನಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ ಫ್ರೂಟ್ಸ್ ಐಡಿ  ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರುಗಳಿಗೆ ಡಿ.ಬಿ.ಟಿ ಮೂಲಕ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಈಗಾಗಲೇ 9 ಕಂತುಗಳಲ್ಲಿ ಮೊದಲನೇ ಕಂತಾಗಿ ಗರಿಷ್ಠ ರೂ.2000/-ರವರೆಗೆ ಬೆಳೆ ಪರಿಹಾರವನ್ನು ರೂ.20.65 ಕೋಟಿ ಪರಿಹಾರ ಒಟ್ಟು 1,04,492 ರೈತರಿಗೆ ವಿತರಿಸಲಾಗಿರುತ್ತದೆ.
ಅದರಂತೆ 2ನೇ ಹಂತದಲ್ಲಿ ಜಿಲ್ಲೆಯ ಅರ್ಹ 91,077 ರೈತರುಗಳಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿನ್ವಯ ರೂ. 92.19 ಕೋಟಿ ಪರಿಹಾರವನ್ನು (ಇನ್ ಪುಟ್ ಸಬ್ಸಿಡಿ) ವಿತರಣೆ ಮಾಡಲು ಅನುಮೋದನೆ ನೀಡಿ ಡಿ.ಬಿ.ಟಿ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗಿರುತ್ತದೆ. ಇಲ್ಲಿಯವರೆಗೆ ಜಿಲ್ಲೆಯ 2 ಹಂತದಲ್ಲಿ ಒಟ್ಟು 1,04,492 ರೈತರಿಗೆ ರೂ. 112.84 ಕೋಟಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಮಾರ್ಗಸೂಚಿನ್ವಯ ಮಳೆಯಾಶ್ರಿತ ಬೆಳೆಗಳಿಗೆ ಒಂದು ಹೇಕ್ಟರ್ ಗೆ ರೂ.8500/-ಗಳಂತೆ, ನೀರಾವರಿ ಬೆಳೆಗಳಿಗೆ ಒಂದು ಹೇಕ್ಟರ್‌ಗೆ ರೂ.17000/-ಗಳಂತೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಒಂದು ಹೇಕ್ಟರ್‌ಗೆ ರೂ.22500/-ಗಳಂತೆ ಬೆಳೆ ಪ್ರಮಾಣಕ್ಕನುಸಾರವಾಗಿ ಬೆಳೆ ಹಾನಿಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
 ಯಾದಗಿರಿ ಜಿಲ್ಲೆಯ ಒಟ್ಟು 1,04,492 ರೈತರ ಪೈಕಿ 13,427 ರೈತರು ಆಧಾರ ಸಂಖ್ಯೆಯು ಬ್ಯಾಂಕಿಗೆ ಜೋಡಣೆ ಆಗದೇ ಇರುವುದರಿಂದ ಪರಿಹಾರದ ಹಣ ಜಮೆ ಆಗಿರುವುದಿಲ್ಲ. ಸದರಿ ವಿಷಯದ ಕುರಿತು ಈಗಾಗಲೇ ಜಿಲ್ಲೆಯ ಎಲ್ಲಾ 06 ತಾಲ್ಲೂಕಿನ ತಹಸೀಲ್ದಾರರಿಗೆ ಬ್ಯಾಂಕಿಗೆ ಜೋಡಣೆಯಾಗದೇ ಇರುವ ರೈತರ ಬ್ಯಾಂಕ್ ಖಾತೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿ ಕಚೇರಿಯಿಂದ ನಿರ್ದೇಶನ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
 ಬೆಳೆ, ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ಐಡಿ ನೋಂದಣಿ ಮಾಡಿಕೊಳ್ಳದ ರೈತರು ತಮ್ಮ ಆಧಾರ, ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಹತ್ತಿರದ ಕಂದಾಯ, ಕೃಷಿ ಅಥವಾ ತೋಟಗಾರಿಗೆ ಇಲಾಖೆಗಳ ಕಛೇರಿಗಳಿಗೆ ಭೇಟಿ ನೀಡಿ ಫ್ರೋಟ್ಸ್ ಐಡಿ ನೋಂದಣಿ ಮಾಡಿಕೊಳ್ಳತಕ್ಕದ್ದು. ಇಲ್ಲವಾದಲ್ಲಿ ಅಂತಹ ರೈತರು ಪರಿಹಾರಕ್ಕೆ ಅರ್ಹರಾಗುವುದಿಲ್ಲವೆಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.