ಯಾದಗಿರಿ ಜಿಲ್ಲೆಯಲ್ಲಿ ಡಿ.22 ರಿಂದ ಕರ್ನಾಟಕ ಸಂಭ್ರಮ-50ರ ಕನ್ನಡ ಜ್ಯೋತಿ ರಥಯಾತ್ರೆಗೆ ಸಂಭ್ರಮದ ಸ್ವಾಗತ- ಸಂಚಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ : ಜಿಲ್ಲಾಧಿಕಾರಿ ಡಾ ಸುಶೀಲ. ಬಿ

ಯಾದಗಿರಿ : ಡಿ 09: ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣ ವಾಗಿ ಕಳೆದ ನವೆಂಬರ್ 01 ಕ್ಕೆ 50 ವರ್ಷ ಪೂರ್ಣಗೊಂಡಿರುವ ಶುಭ ಸಂದರ್ಭದಲ್ಲಿ “ಕರ್ನಾಟಕ ಸಂಭ್ರಮ-50” ರ “ಹೆಸರಾಯಿತು ಕರ್ನಾಟಕ , ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ಇದೇ ಡಿಸೆಂಬರ್ 22 ರಿಂದ ಜನೇವರಿ03 ರವರೆಗೆ ಜಿಲ್ಲೆಯಾದ್ಯಂತ “ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆ” ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶ್ರೀಮತಿ. ಡಾ. ಸುಶೀಲ.ಬಿ ಅವರು ತಿಳಿಸಿದ್ದಾರೆ.

  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಶುಕ್ರವಾರ ರಂದು ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ ಮತ್ತು  ಸಂಚಾರಕ್ಕಾಗಿ ಕೈಗೊಳ್ಳಬೇಕಾದ ಸಿದ್ಧತೆ ಗಳ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ 6 ತಾಲ್ಲೂಕುಗಳ ವಿವಿಧ ಸ್ಥಳಗಳ ಮೂಲಕ ಕನ್ನಡ ನಾಡು ನುಡಿಯ, ಸಾಂಸ್ಕøತಿಕ ಪರಂಪರೆ, ಇತಿಹಾಸ ಮತ್ತು ಕನ್ನಡದ ಮಹತ್ವವನ್ನು ಸಾರಿ ಹೇಳುವ ವಿಶೇಷ ಜ್ಯೋತಿ ರಥಯಾತ್ರೆ ಇದಾಗಿದ್ದು, ಆಯಾ ತಾಲ್ಲೂಕು ತಹಸೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು , ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಸಮನ್ವಯತೆದೊಂದಿಗೆ ಈ ಜ್ಯೋತಿ ಯಾತ್ರೆಗೆ ಸಂಭ್ರಮದ ಸ್ವಾಗತ- ಸಂಚಾರ ಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಜ್ಯೋತಿ ಯಾತ್ರೆ ಸಂದರ್ಭದಲ್ಲಿ ವಿವಿಧ ಕಲಾ ತಂಡಗಳ ಮತ್ತು ಯಾತ್ರೆಗೆ ಸಂಬಂಧಿಸಿದ ತಾಲ್ಲೂಕುವಾರು ರೂಟ್ ಮ್ಯಾಪ್ ಸಿದ್ಧಪಡಿಸಿ ವಿವಿಧ ಸ್ಥಳಗಳ ಮೂಲಕ ಜ್ಯೋತಿಯಾತ್ರೆ ಹೋಗುವ ಪಟ್ಟಿಯನ್ನು ಸಿದ್ಧಪಡಿಸಿ ಸಭೆ ನಡೆಸಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಜ್ಯೋತಿಯಾತ್ರೆ ಸಂದರ್ಭದಲ್ಲಿ ಸಂಭ್ರಮದ ಸ್ವಾಗತ, ಪೂಜೆ, ಪುಷ್ಪಾರ್ಚನೆ, ವಿವಿಧ ಸಾಂಸ್ಕೃತಿಕ, ಐತಿಹಾಸಿಕ, ಸ್ಥಳೀಯ ಕಲೆಗಳ ಪೆÇ್ರೀತ್ಸಾಹ ಒಳಗೊಂಡ ಕಾರ್ಯಕ್ರಮಗಳ ಮೂಲಕ ಯಾತ್ರೆ ಸಂಚರಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸ್ಥಳೀಯ ಶಾಸಕರು ಆಹ್ವಾನಿಸಬೇಕು. ಸಾರ್ವಜನಿಕರು, ಜನಪ್ರತಿನಿಧಿಗಳು, ಸಾಹಿತಿಗಳು, ಅಧಿಕಾರಿ ಸಿಬ್ಬಂದಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು , ಕಲಾವಿದರು, ಕನ್ನಡಪರ ಸಂಘಟನೆಗಳು, ಸ್ವಾತಂತ್ರ್ಯ ಹೋರಾಟಗಾರರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸಮನ್ವಯತೆಯಿಂದ ಯೋಜನಾ ಬದ್ಧವಾದ ಜ್ಯೋತಿಯಾತ್ರೆಗೆ ರೂಪುರೇಷೆ ಯೋಜನೆಯನ್ನು ಸಿದ್ಧಪಡಿಸಬೇಕು.
ಅದರಂತೆ ವಿವಿಧ ತಾಲೂಕವಾರು ಸಭೆ ಮತ್ತು ತಂಡಗಳನ್ನು ರಚಿಸಿ , ಕಲಾ ತಂಡಗಳ ಮಾಹಿತಿ ಕುರಿತು ಇದೇ ಡಿಸೆಂಬರ್ 15 ರೊಳಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಕನ್ನಡ ಜ್ಯೋತಿಯನ್ನು ಹೊತ್ತ ರಥಯಾತ್ರೆಯು ಇತಿಹಾಸ, ಕಲೆ, ಸಾಹಿತ್ಯ , ಸಂಸ್ಕೃತಿ, ನಾಡುನುಡಿಗೆ ಸಂಬಂಧಿಸಿದ ಹಾಗೂ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಕರ್ನಾಟಕ ಸಂಭ್ರಮ -50ರ ಈ ಮಹತ್ವದ ಕನ್ನಡ ಜ್ಯೋತಿ ಯಾತ್ರೆ ರಾಯಚೂರನಿಂದ ಆಗಮಿಸಲಿದ್ದು, ಡಿಸೆಂಬರ್.22-ರಂದು ಬೆಳಿಗ್ಗೆ 09 ಗಂಟೆಗೆ ಹುಣಸಗಿ ತಾಲ್ಲೂಕಿನ ಗಡಿಯಲ್ಲಿ ಸ್ವಾಗತಿಸಿ, ಎರಡು ದಿನಗಳ ಕಾಲ ಪ್ರತಿದಿನ ಸಂಜೆ 4 ಗಂಟೆಯ ವರೆಗೆ ಪಟ್ಟಣ ಹಾಗೂ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಬೇಕು.

ಅದರಂತೆ ಡಿಸೆಂಬರ್.24-25 ರಂದು ಶೋರಾಪುರ ತಾಲ್ಲೂಕಿನಲ್ಲಿ, ಡಿ.26-27 ರಂದು ಶಹಾಪುರ ತಾಲ್ಲೂಕಿನಲ್ಲಿ, ಡಿ.28-29 ರಂದು ವಡಗೇರಾ ತಾಲ್ಲೂಕಿನಲ್ಲಿ, ಡಿ.30-31 ರಂದು ಯಾದಗಿರಿ ತಾಲ್ಲೂಕಿನಲ್ಲಿ ಹಾಗೂ ಜನವೇರಿ 01-02 ರಂದು ಗುರುಮಿಟಕಲ್ ನ ವಿವಿಧ ಪಟ್ಟಣ ಮತ್ತು ಗ್ರಾಮಗಳ ಪ್ರದೇಶಗಳಲ್ಲಿ ಈ ರಥಯಾತ್ರೆ ನಡೆಯಲಿದ್ದು, ನಂತರ 03 ರಂದು ಗುರುಮಿಟಕಲ್ ದಿಂದ ಸೇಡಂ ಗೆ ಬೀಳ್ಕೊಡಲು ಸಂಬಂಧಿಸಿದ ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಅದರಂತೆ ವಿವಿಧ ಹೋಬಳಿ ಹಾಗೂ ಗ್ರಾಮ ಪಂಚಾಯಿತಿಗಳ ಹಾಗೂ ತಾಲ್ಲೂಕಿನ ಗಡಿಭಾಗದ ವರೆಗಿನ ಮಾರ್ಗಗಳ ಮಧ್ಯದಲ್ಲಿ ಗೌರವಯುತವಾಗಿ ಈ ಜ್ಯೋತಿ ಯಾತ್ರೆಗೆ ಬರಮಾಡಿಕೊಳ್ಳುವ ಮತ್ತು ಬೀಳ್ಕೊಡುವ ವ್ಯವಸ್ಥೆ ಮಾಡಬೇಕು. ಸೂಕ್ತ ಪೆÇಲೀಸ್ ಬಂದೋಬಸ್ತ್ ಮಾಡಬೇಕು. ಪ್ರತಿ ತಾಲ್ಲೂಕಿನಲ್ಲಿ ಎರಡು ದಿನಗಳ ಕಾಲ ಈ ಕನ್ನಡ ಜ್ಯೋತಿಯಾತ್ರೆ ಇರುವುದರಿಂದ ಎರಡು ದಿನಕ್ಕೆ ನಿಗದಿಪಡಿಸಿ ಸಂಚರಿಸುವ ಮಾರ್ಗ ಪಟ್ಟಣ ಹಳ್ಳಿಗಳಲ್ಲಿ ಸ್ವಾಗತ, ಪೂಜೆ, ಪುಷ್ಪಾರ್ಚನೆ ಮೂಲಕ ಮೆರವಣಿಗೆಗೆ ಕ್ರಮ ಕೈಗೊಳ್ಳಬೇಕು. ಶಿಷ್ಟಾಚಾರದ ಅನ್ವಯ ಬರಮಾಡಿಕೊಂಡು ಬೀಳ್ಕೊಡುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಯಾದಗಿರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಹೊಟ್ಟಿಯವರು ಪ್ರತಿ ತಾಲ್ಲೂಕಿಗೆ ತಲಾ 100 ಧ್ವಜ ಹಾಗೂ ಕೊರಳಪಟ್ಟಿ ನೀಡಲಾಗುವುದು ಎಂದರು. ಅದರಂತೆ ಸಹಕಾರಿ ಸಂಘಗಳ 50 ಮೀಟರ್ ಉದ್ದದ ಕನ್ನಡ ಧ್ವಜ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ ಸ್ವಾಗತಿಸಿ ಕನ್ನಡ ಜ್ಯೋತಿ ರಥಯಾತ್ರೆ ಕುರಿತು ಮಾಹಿತಿ ನೀಡಿದರು.