ಯಾಜ್ಞವಲ್ಕ್ಯ ಸ್ಮøತಿ: ಅಂದು-ಇಂದು- ಎಂದೆಂದೂ ಕೃತಿ ಲೋಕಾರ್ಪಣೆ

ಕಲಬುರಗಿ:ಮಾ.01: ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಬಳಿ ಇರುವ ಕನ್ನಡ ಭವನದ ಸಭಾಂಗಣದಲ್ಲಿ ಮಾರ್ಚ್ 3ರಂದು ಬೆಳಿಗ್ಗೆ 11ಕ್ಕೆ ಶ್ರೀವಿಜಯ ಪ್ರಕಾಶನದ ಪ್ರಥಮ ಕೃತಿ, ಹಿರಿಯ ಪತ್ರಕರ್ತ, ಸಾಹಿತಿ ಡಾ. ಶ್ರೀನಿವಾಸ್ ಸಿರನೂರಕರ್ ಅವರು ರಚಿಸಿದ ಯಾಜ್ಞವಲ್ಕ್ಯ ಸ್ಮøತಿ: ಅಂದು-ಇಂದು- ಎಂದೆಂದೂ ಕೃತಿ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ರಾಜೀವ್ ಜೋಶಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಆಸ್ಸಾಂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಜೆ.ಎಸ್. ಪಾಟೀಲ್ ಅವರು ಕೃತಿ ಬಿಡುಗಡೆ ಮಾಡುವರು ಎಂದರು.
ಶ್ರೀ ವಿಜಯನು ಕನ್ನಡ ನಾಡಿನ ಮೊದಲ ಕವಿ, ಕನ್ನಡ- ಕನ್ನಡಿಗರ ಅಸ್ಮಿತೆಯನ್ನು ಪ್ರಪಂಚಕ್ಕೆ ಪರಿಚಯಿಸಿ ಕನ್ನಡದ ಕೀರ್ತಿಯನ್ನು ಮೊದಲ ಬಾರಿಗೆ ಜಗತ್ತಿಗೆ ಸಾರಿದ ದಾರ್ಶನಿಕ ಕವಿ. ಸಮಸ್ತ ಕನ್ನಡಿಗರು ವಿಶೇಷವಾಗಿ ಜಿಲ್ಲೆಯ ಕನ್ನಡಿಗರ ಸ್ವಾಭಿಮಾನಿ ಪ್ರತೀಕವಾಗಿರುವ ಶ್ರೀ ವಿಜಯನ ಹೆಸರಿನಲ್ಲಿ ಶ್ರೀವಿಜಯ ಪ್ರಕಾಶನ ಆರಂಭಿಸಲಾಗಿದೆ. ಮೊದಲ ಕೃತಿಯನ್ನು ಹೆಮ್ಮೆಯಿಂದ ಅರ್ಪಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಪತ್ರಕರ್ತ ಹಾಗೂ ಸಾಹಿತಿ ಡಾ. ಶ್ರೀನಿವಾಸ್ ಸಿರನೂರಕರ್ ಅವರು ರಚಿಸಿದ ಕೃತಿಯು ಭಾರತೀಯ ಜ್ಞಾನ ಪರಂಪರೆಯಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದ ಯಾಜ್ಞವಲ್ಕ್ಯ ಸ್ಮøತಿ ಮತ್ತು ಅದರ ಸಾರ್ವತ್ರಿಕ- ಸಾರ್ವಕಾಲಿಕ ಮೌಲ್ಯಗಳ ಕುರಿತಾಗಿದ್ದು, ನಮ್ಮ ಪ್ರಕಾಶನಕ್ಕೆ ಹೆಮ್ಮೆಯ ಸಂಗತಿ. ಎಲ್ಲ ಸ್ಮøತಿಕಾರರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವವರು ಯಾಜ್ಞವಲ್ಕ್ಯರು. ಅವರು ರಚಿಸಿದ ಯಾಜ್ಞವಲ್ಕ್ಯ ಸ್ಮøತಿಯ ಪ್ರಸ್ತುತತೆ ಹಾಗೂ ಇಂದಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ನ್ಯಾಯ- ಕಾನೂನು ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ಜನಮಾನಸಕ್ಕೆ ಅದರ ಉಪಯುಕ್ತತೆಯ ಕುರಿತು ಕೃತಿಯಲ್ಲಿ ವಿವರವಾಗಿ ಒಡಮೂಡಿದೆ ಎಂದು ಅವರು ವಿವರಿಸಿದರು.
ಭಾರತೀಯ ಜ್ಞಾನ ಪರಂಪರೆಯ ತತ್ವಗಳನ್ನು ಹಾಗೂ ಅದರ ಸತ್ವವನ್ನು ಅಧ್ಯಯನಶೀಲರು, ಸಂಶೋಧಕರು, ಜಿಜ್ಞಾಸುಗಳು, ವೃತ್ತಿಪರರು ಕೂಲಂಕುಷವಾಗಿ ಅಧ್ಯಯನ ಮಾಡುವ ಸಕಾಲ ಇದಾಗಿದೆ. ಕೃತಿ ಭಾರತೀಯ ಧರ್ಮ ಶಾಸ್ತ್ರದಲ್ಲಿ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಪ್ರೇರಣೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಬಿಡುಗಡೆ ದಿನದ ಕೊಡುಗೆಯಾಗಿ ರಿಯಾಯಿತಿ ದರದಲ್ಲಿ ಕೃತಿಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಅಧ್ಯಯನಶೀಲರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಲೇಖಕ ಡಾ. ಶ್ರೀನಿವಾಸ್ ಸಿರನೂರಕರ್, ಜಗನ್ನಾಥ್ ಉಟಗಿ ಅವರು ಉಪಸ್ಥಿತರಿದ್ದರು.