ಯಾಜ್ಞವಲ್ಕ್ಯ ಜಯಂತಿಗೆ ಮನವಿ-ವತ್ಸಲಾರಿಂದ ಆತುರವಾದ ಪ್ರಯತ್ನ -ಸುಧಾಕರ್ ಬಾಬು

ಕೋಲಾರ, ನ.೧೨: ಶುಕ್ಲ ಯಾಜ್ಞವಲ್ಕ್ಯ ಮಹಾಮಂಡಳಿಯಲ್ಲಿ ಪ್ರಸ್ತಾಪಿಸದೇ ಏಕಾಏಕಿ ಯೋಗೀಶ್ವರ ಯಾಜ್ಞವಲ್ಕ್ಯರ ಜಯಂತಿ ನಡೆಸಲು ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿರ್ದೇಶಕಿ ವತ್ಸಲಾ ನಾಗೇಶ್ ಅವರ ಧೋರಣೆಯನ್ನು ಶುಕ್ಲ ಯಾಜ್ಞವಲ್ಕ್ಯ ಮಹಾ ಮಂಡಳಿ ಅಧ್ಯಕ್ಷ ಹಿರಿಯ ವಕೀಲ ಸುಧಾಕರ್‍ಬಾಬು ಟೀಕಿಸಿದರು.
ಈ ಕುರಿತು ಕೋಲಾರದಲ್ಲಿ ಹೇಳಿಕೆ ನೀಡಿರುವ ಅವರು, ಯೋಗೀಶ್ವರ ಯಾಜ್ಞವಲ್ಕ್ಯ ರ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕೆನ್ನುವ ವತ್ಸಲಾ ನಾಗೇಶ್ ಅವರ ಉದ್ದೇಶ ಸ್ವಾಗತಾರ್ಹ ಆದರೆ ಅವರ ಆತುರ ಖಂಡನೀಯ ಎಂದು ತಿಳಿಸಿದರು.
ಶುಕ್ಲ ಯಾಜ್ಞವಲ್ಕ್ಯ ಮಹಾಮಂಡಳಿಯ ಸಭೆ ಕರೆದು ಅಲ್ಲಿ ಚರ್ಚಿಸಿ ಒಂದಷ್ಟು ಮಂದಿ ಸಮುದಾಯದ ಮುಖಂಡರು ಒಟ್ಟುಗೂಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಅದಕ್ಕೆ ಗೌರವವೂ ಇರುತ್ತದೆ, ಅದು ಸಫಲವೂ ಆಗುತ್ತದೆ, ಆದರೆ ಒಂದಿಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳನ್ನು ಜತೆ ಕರೆದುಕೊಂಡು ಹೋಗಿ ಆತುರಾತುರವಾಗಿ ಮನವಿ ನೀಡುವ ಅವರ ಪ್ರಯತ್ನ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದರು.
ಯಾಜ್ಞವಲ್ಕ್ಯರ ಅನುಯಾಯಿಗಳ ಸಮುದಾಯ ಬಹಳಷ್ಟು ವಿಶಾಲವಾಗಿ ಬೇರೂರಿದೆ ರಾಜ್ಯಾದ್ಯಂತ ಹಾಗೂ ದೇಶಾದ್ಯಂತ.. ಹೀಗಿರುವಾಗ ತಾವೊಬ್ಬರೆ ನಿರ್ಣಯ ತೆಗೆದುಕೊಂಡು ಕೆಲವು ಕಿರಿಯ ವಯಸ್ಸಿನ ವೇದ ವಿದ್ಯಾರ್ಥಿಗಳ ಜೊತೆ ಹೋಗಿ ಈ ಗಂಭಿರವಾದ ಘನತೆ ಗೌರವ ಹೊಂದಿದ ವಿಚಾರ ಮಂಡನೆ ನಮ್ಮ ಸಮುದಾಯಕ್ಕೆ ಶೋಭೆ ತರುವಂತದಲ್ಲ ಎಂದು ಸಲಹೆ ನೀಡಿದರು.
ಯೋಗೀಶ್ವರ ಯಾಜ್ಞವಲ್ಕ್ಯ ರ ಜಯಂತಿ ಸರ್ಕಾರದ ವತಿಯಿಂದ ಆದರೆ ಎಲ್ಲರಿಗೂ ಸಂತೋಷ ಮತ್ತು ಶುಕ್ಲ ಯಜುರ್ವೇದ ಸಮುದಾಯ ಹೆಮ್ಮೆ ಪಡುವಂತ ವಿಚಾರ. ಈ ನಿಟ್ಟಿನಲ್ಲಿ ಮಂಡಳಿ ಈಗಾಗಲೇ ತನ್ನ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.