
ಉಡುಪಿ, ಎ.೧೪- ಪಕ್ಷ ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಟಿಕೆಟ್ ವಂಚಿತ ಉಡುಪಿ ಶಾಸಕ ಕೆ.ರಘುಪತಿ ಭಟ್ ಇದೀಗ ನೋವು ಮರೆತು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರಿಗೆ ಬೆಂಬಲ ಘೋಷಿಸಿದರು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘುಪತಿ ಭಟ್, ನನ್ನದೇ ಚುನಾವಣೆ ಎಂಬ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತೇನೆ ೬೦,೦೦೦ ಮತಗಳ ಅಂತರದಲ್ಲಿ ಯಶ್ಪಾಲ್ ಸುವರ್ಣ ಗೆಲ್ಲುತ್ತಾರೆ. ಇವತ್ತಿನಿಂದ ಸಂಘಟನಾತ್ಮಕ ಕಾರ್ಯ ಚಟುವಟಿಕೆ ಪ್ರಾರಂಭವಾಗುತ್ತದೆ. ಯಶ್ಪಾಲ್ ಜೊತೆಯಲ್ಲಿ ನಾನು ಚುನಾವಣೆಯ ದಿನದವರೆಗೂ ಪ್ರಚಾರ ಕಾರ್ಯ ನಡೆಸುತ್ತೇನೆ. ಎಲ್ಲರೂ ಕೂಡ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತೇವೆ. ಎಲ್ಲ ಗೊಂದಲಗಳನ್ನು ಮರೆತು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ನಿನ್ನೆ ನಾನು ಭಾವನಾತ್ಮಕವಾಗಿ ತುಂಬಾ ಬೇಸರದಿಂದ ಮಾತನಾಡಿದ್ದೆ. ಈ ಬಗ್ಗೆ ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಬೇಡ. ನಾನು ಅಭ್ಯರ್ಥಿಯಾದರೆ ಎಷ್ಟು ವೇಗದಲ್ಲಿ ಕೆಲಸ ಮಾಡು ತ್ತೇನೋ ಅದೇ ರೀತಿ ಕೆಲಸ ಮಾಡುತ್ತೇನೆ. ನೂರಕ್ಕೆ ನೂರು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದರು. ಮಾಜಿ ಸಿಎಂ ಯಡಿಯೂರಪ್ಪ ನನಗೆ ಕರೆ ಮಾಡಿದ್ದರು. ಅವರು ಕರೆ ಮಾಡುವ ಮುಂಚೆ ನಾನು ಕೆಲಸ ಆರಂಭಿಸಿದ್ದೆ. ನೀನು ಒಳ್ಳೆ ಕಾರ್ಯಕರ್ತ, ನಿನಗೆ ಒಳ್ಳೆ ಭವಿಷ್ಯ ಇದೆ ಎಂದು ಭರವಸೆ ನೀಡಿದ್ದಾರೆ. ಬಿ.ಎಲ್. ಸಂತೋಷ್ ಟ್ವೀಟ್ ಮೂಲಕ ನನ್ನ ನಡೆಯನ್ನು ಪ್ರಶಂಶಿಸಿದ್ದಾರೆ. ಇದು ನನಗೆ ತುಂಬಾ ಹೆಮ್ಮೆಯ ವಿಷಯವಾಗಿದೆ. ಈ ವಿಚಾರದಲ್ಲಿ ಯಾವುದೇ ಟ್ರಬಲ್ ಇಲ್ಲ. ಟ್ರಬಲ್ ಶೂಟರ್ ಕೂಡ ಇಲ್ಲ. ಪಕ್ಷ ನಮಗೆ ಒಳ್ಳೆಯ ಅಭ್ಯರ್ಥಿ ಕೊಟ್ಟಿದ್ದಾರೆ. ಇನ್ನು ಮುಂದೆ ನಾನು ಅಸಮಾಧಾನದ ಮಾತನಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು. ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ನಮ್ಮ ಒಗ್ಗಟ್ಟನ್ನು ಜನರ ಮುಂದೆ ಪ್ರದರ್ಶಿಸಿದ್ದೇವೆ. ರಘುಪತಿ ಭಟ್ ಸಂಘದ ಶಿಕ್ಷಣ ಪಡೆದವರು. ರಘುಪತಿ ಭಟ್ ಅಭಿವೃದ್ಧಿ ಕಾರ್ಯ ಜನರ ಮುಂದೆ ತೋರಿಸಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್.ಕಲ್ಮಾಡಿ, ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ಎಸ್.ನಾಯ್ಕ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಗಣೇಶ್ ಹೊಸಬೆಟ್ಟು, ಉಮೇಶ್ ಎ.ನಾಯ್ಕ್, ಪ್ರತಾಪ್ ಹೆಗ್ಡೆ ಮಾರಾಳಿ, ದಿನಕರ ಶೆಟ್ಟಿ ಹೆರ್ಗ, ರಾಜೇಶ್ ಶೆಟ್ಟಿ ಬಿರ್ತಿ ಉಪಸ್ಥಿತರಿದ್ದರು.