ಯಶೋಭೂಮಿ, ಮೋದಿ ಸಮರ್ಪಣೆ

ನವೆಹಲಿ,ಸೆ.೧೭- ರಾಷ್ಟ್ರ ರಾಜಧಾನಿ ದ್ವಾರಕದಲ್ಲಿ ಬರೋಬ್ಬರಿ ೫೪೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿಶ್ವ ದರ್ಜೆಯ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಯಶೋಭೂಮಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮರ್ಪಿಸಿದರು.
ಒಟ್ಟು ೮.೯ ಲಕ್ಷ ಚದರ ಮೀಟರ್‍ಗಳ ಯೋಜನಾ ಪ್ರದೇಶ ಮತ್ತು ೧.೮ ಲಕ್ಷ ಚದರ ಮೀಟರ್‍ಗಿಂತಲೂ ಹೆಚ್ಚು ಪ್ರದೇಶದಲ್ಲಿ ‘ಯಶೋಭೂಮಿ’ ನಿರ್ಮಾಣ ಮಾಡಲಾಗಿದೆ. ಇಲ್ಲಿ ವಿಶ್ವದ ಅತಿದೊಡ್ಡ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳ ನಡೆಸಲು ಸಹಕಾರಿಯಾಗಲಿದೆ.
೭೩,೦೦೦ ಚದರ ಮೀಟರ್‍ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಿಸಲಾದ ಸಮಾವೇಶ ಕೇಂದ್ರದ ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು ೧೧,೦೦೦ ಪ್ರತಿನಿಧಿಗಳ ಸಾಮರ್ಥ್ಯ ಹೊಂದಿದ್ದು ಒಟ್ಟು ಸಾಮರ್ಥ್ಯದ ೧೩ ಸಭೆ ಕೊಠಡಿಗಳನ್ನು ಒಳಗೊಂಡಂತೆ ೧೫ ಸಮಾವೇಶ ಕೊಠಡಿಗಳನ್ನು ಒಳಗೊಂಡಿದೆ.
ಕನ್ವೆನ್ಷನ್ ಸೆಂಟರ್ ದೇಶದಲ್ಲೇ ಅತಿ ದೊಡ್ಡ ಎಲ್‌ಇಡಿ ಮಾಧ್ಯಮದ ಕೇಂದ್ರ ಹೊಂದಿದೆ. ಸುಮಾರು ೬,೦೦೦ ಅತಿಥಿಗಳು ಏಕ ಕಾಲದಲ್ಲಿ ಕುಳಿತುಕೊಳ್ಳುವ ಸ್ಥಳಾವಕಾಶವಿದೆ. ಸಭಾಂಗಣ ನವೀನ ಸ್ವಯಂಚಾಲಿತ ಆಸನ ವ್ಯವಸ್ಥೆ ಹೊಂದಿದೆ.
ಮೆಟ್ರೋ ರೈಲು ವಿಸ್ತರಣೆ:
ಇದೇ ಸಂದರ್ಭದಲ್ಲಿ ದೆಹಲಿ ಮೆಟ್ರೋದ ಏರ್‌ಫೋರ್ಟ್ ಲೈನ್‌ನ ವಿಸ್ತರಣೆ ಉದ್ಘಾಟಿಸಿದರು, ಯಶೋಭೂಮಿ ದ್ವಾರಕಾ ಸೆಕ್ಟರ್ ೨೫ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.
ಹೊಸ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಮಾರ್ಗದ ಸುಮಾರು ಎರಡು ಕಿಮೀ ವಿಸ್ತರಣೆಯ ವಿಸ್ತರಣೆಗೆ ಹಸಿರು ನಿಶಾನೆ ತೋರಿದ ಬಳಿಕ ಕೆಲವು ಮೆಟ್ರೋ ಕಾರ್ಮಿಕರೊಂದಿಗೆ ಪ್ರಧಾನಿ ಸಂವಾದ ನಡೆಸಿದರು
ಉದ್ಘಾಟನೆಗೂ ಮುನ್ನ ಮೋದಿ ಅವರು ಧೌಲಾ ಕುವಾನ್ ನಿಲ್ದಾಣದಿಂದ ಹೊಸದಾಗಿ ನಿರ್ಮಿಸಲಾದ ಯಶೋಭೂಮಿ ದ್ವಾರಕಾ ಸೆಕ್ಟರ್ ೨೫ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋದಲ್ಲಿ ಸಂಚಾರ ನಡೆಸಿದರು.
ರೈಲಿನ ಪ್ರಯಾಣದ ಸಮಯದಲ್ಲಿ ಯುವಕರು ಮತ್ತು ಹಿರಿಯರು, ಪುರುಷರು ಮತ್ತು ಮಹಿಳೆಯರು, ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸಿದರು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.
ಸಂವಾದ
ಸುಸಜ್ಜಿತ ವಸ್ತು ಪ್ರದರ್ಶನ ಕೇಂದ್ರ ಉದ್ಘಾಟನೆ ಬಳಿಕ ಅಲ್ಲಿನ ಕಾರ್ಮಿಕರು, ಕುಶಲಕರ್ಮಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಸಂವಾದ ನಡೆಸಿದರು.