ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೩: ನಿರ್ದಿಷ್ಟವಾದ ಎತ್ತರದ ಗುರಿ, ಗುರಿ ಮುಟ್ಟಲು ಸತತ ಪ್ರಯತ್ನ ಜೊತೆಗೆ ಒಂದಿಷ್ಟು ಆತ್ಮವಿಶ್ವಾಸ ಹಾಗೂ ನಂಬಿಕೆ ಮತ್ತು ಛಲ ಇವುಗಳನ್ನು ಒಟ್ಟಾಗಿ ಸೇರಿಸಿ ಪ್ರಯತ್ನಪಟ್ಟರೆ ಸದಾ ಯಶಸ್ಸು ನಿಮ್ಮ ಕೈಯಲ್ಲಿರುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ ವೆಂಕಟೇಶ್ ಬಾಬು ಹೇಳಿದರು. ವಿದ್ಯಾನಗರದ ಜ್ಞಾನ ಕಾಶಿ ಕೆರಿಯರ್ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಇದು ಜ್ಞಾನ ಹಾಗೂ ಸ್ಪರ್ಧೆಯ ಯುಗ ಈ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನದ ಹಸಿವಿರುವವರು ಜ್ಞಾನಗಳಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ತಮ್ಮ ಜೀವನ ಗುರಿ ದೊಡ್ಡದಿರಬೇಕು ಆಗ ಮಾತ್ರ ಅದನ್ನು ತಲುಪಲು ಸಾಧ್ಯವಾಗುತ್ತದೆ. ಮೊದಲು ತಾನು ಏನಾಗಬೇಕು ಎಂಬುದನ್ನು ನಿರ್ಧರಿಸಿಕೊಂಡು ನಂತರ ಪ್ರಯತ್ನಿಸಿದರೆ ಆಗ ಯಶಸ್ಸು ಸಾಧ್ಯ ಇಲ್ಲದಿದ್ದರೆ ಜೀವನದಲ್ಲಿ ಯಾವುದನ್ನು ಗಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.ಪ್ರತಿಯೊಬ್ಬ ಮನುಷ್ಯನು ಓದುವುದನ್ನು ನಿರಂತರ ಹವ್ಯಾಸವಾಗಿಸಿಕೊಳ್ಳಬೇಕು ಓದುವುದರಿಂದ ಪ್ರತಿಯೊಬ್ಬರಿಗೂ ವಿನಯ ಸಂಸ್ಕೃತಿ, ಜ್ಞಾನ ಸಂಪಾದನೆ ಗೌರವ ಎಲ್ಲವೂ ದೊರಕುತ್ತದೆ ಜ್ಞಾನಗಳಿಗೆ ಮಾತ್ರ ಪ್ರಪಂಚದಲ್ಲಿ ಎಂದೆಂದೂ ಗೌರವ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವೇಶ್ವರಯ್ಯ ವಿವೇಕಾನಂದರ ಅಬ್ದುಲ್ ಕಲಾಮರ ಉದಾಹರಣೆಗಳ ಸಮೇತ ವಿವರಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಮಾತನಾಡುತ್ತಾ ಪ್ರತಿಯೊಬ್ಬರಿಗೂ ಕಷ್ಟಗಳು ಬರುತ್ತವೆ ಅವುಗಳನ್ನು ನೆಪ ಮಾಡಿಕೊಳ್ಳದೆ ಅವುಗಳನ್ನು ಸಹಿಸಿಕೊಂಡಾಗ ಏನಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ನಿರ್ದೇಶಕರಾದ ಬಸನಗೌಡ ಸಂಸ್ಥೆಯು ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ, ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಅನುವು ಮಾಡಿಕೊಡುತ್ತದೆ ವಿದ್ಯಾರ್ಥಿಗಳು ಜೀವನದಲ್ಲಿ ತಮ್ಮ ಗುರಿಗಳನ್ನು ಸಾಧಸಲು ಸಾಧ್ಯ ಎಂದು ಹೇಳಿದರು.