ಯಶಸ್ಸು ಕಠಿಣ ಪರಿಶ್ರಮವನ್ನು ಅವಲಂಬಿಸಿದೆ:ಮದಿರೆ ಮರಿಸ್ವಾಮಿ


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.22: ಯಾವುದೇ ಜ್ಞಾನವನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ಶ್ರದ್ಧಾ ಭಕ್ತಿಯಿಂದ ಗುರುಗಳನ್ನು ಪೂಜ್ಯನೀಯ ಭಾವನೆಯಿಂದ ಗೌರವಿಸಿದಾಗ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಮದಿರೆ ಮರಿಸ್ವಾಮಿ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಭುವನವಿಜಯ ಸಭಾಂಗಣದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗವು ಹಮ್ಮಿಕೊಂಡಿದ್ದ ಬಿ ಮ್ಯೂಜಿಕ್ ಮತ್ತು ಎಂ ಮ್ಯೂಜಿಕ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೀವನದ ನೋವು ನಲಿವುಗಳಲ್ಲಿ ಸಂಗೀತದ ಮಹತ್ವ ಅಪಾರವಾದುದು. ಸಂಗೀತ ಕಲೆಯಲ್ಲಿ ಸಂತೋಷವಿದೆ. ಆದರೆ ಕಲಾವಿದರ ಬದುಕು ದುರಂತಮಯವಾಗಿದೆ. ಆದ್ದರಿಂದ ಕಲಾವಿದರಿಗೆ ಸೂಕ್ತ ಗೌರವದ ಅವಶ್ಯಕತೆ ಇದೆ ಎಂದು ಕಳಕಳಿ ವ್ಯಕ್ತಪಡಿಸಿದರು. ಸಂಗೀತ ಅಭ್ಯಾಸಕ್ಕೆಂದು ಬಂದ ನೀವೆಲ್ಲಾ ಈ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿ ವಿಶ್ವವಿದ್ಯಾಲಯ ಮತ್ತು ಗುರುಗಳಿಗೆ ಹೆಸರು ತಂದು ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕುಲಸಚಿವ ಡಾ. ಎ ಸುಬ್ಬಣ್ಣ ರೈ ಅವರು  ಮಾತನಾಡುತ್ತ ಮದಿರೆ ಮರಿಸ್ವಾಮಿಯವರ ಕಲಾ ಜೀವನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು. ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗ ಅತ್ಯಂತ ಕ್ರಿಯಾಶೀಲವಾಗಿದೆ. ಕನ್ನಡ ವಿಶ್ವವಿದ್ಯಾಲಯ ನುಡಿಗೆ ಸಂಬಂಧಪಟ್ಟಿದ್ದರಿಂದಲೇ ಮಾತೃ ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದು, ಅಲ್ಲಮಪ್ರಭುದೇವರ ವಚನದ ಸಾಲುಗಳನ್ನು ಧ್ಯೇಯ ಗೀತೆಯಾಗಿ ಅಳವಡಿಸಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ಗೋವಿಂದ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಶೋಧನಾರ್ಥಿ ಅಂಜಲಿ ನಿರೂಪಿಸಿದರು. ಶರಣಪ್ಪ ಸ್ವಾಗತಿಸಿದರು. ರಾಜೇಶ್ ಹಳೆಮನೆ ವಂದಿಸಿದರು. ವಿಭಾಗದ ಅಧ್ಯಾಪಕರಾದ ಜ್ಯೋತಿ, ಡಾ. ತಿಮ್ಮಣ್ಣ ಭೀಮರಾಯ್, ಡಾ.ತೇಜಸ್ವಿ ಹೆಗಡೆ, ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Attachments area