ಯಶಸ್ಸಿಗೆ ಯಶಸ್ವಿ ಕಾರ್ಯತತ್ಪರತೆ ಕಾರಣ


ಹುಬ್ಬಳ್ಳಿ, ನ 18: ಯಾವುದೇ ಸೌಹಾರ್ದ ಸಹಕಾರಿ ನಿಯಮಿತಗಳು ಯಶಸ್ವಿಯಾಗಿ ಮುನ್ನಡೆಯಲು ಅವುಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಯಶಸ್ವಿ ಕಾರ್ಯತತ್ಪರತೆ ಪ್ರಮುಖ ಕಾರಣವಾಗುತ್ತದೆ ಎಂದು ಕೆಎಲ್‍ಇ ಸಂಸ್ಥೆಯ ನಿರ್ದೇಶಕ, ಶ್ರೀ ಗುರುಸಿದ್ಧೇಶ್ವರ ಕೋ. ಆಪ್ ಬ್ಯಾಂಕ್ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಹೇಳಿದರು.
ನಗರದ ಗೋಕುಲ್ ರಸ್ತೆಯ ಮಂಜುನಾಥ ನಗರದಲ್ಲಿಂದು ನೂತನ ಶ್ರೀ ದತ್ತ ಸೌಹಾರ್ದ ಸಹಕಾರಿ ನಿಯಮಿತವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಬ್ಯಾಂಕಿನ ಸಂಸ್ಥಾಪಕ -ಅಧ್ಯಕ್ಷ ಪ್ರಕಾಶ ಜೋಶಿ ಅವರು ಅತ್ಯಂತ ನುರಿತವರು. ಪ್ರತಿಷ್ಠಿತ ಬ್ಯಾಂಕ್‍ನಲ್ಲಿ ಸೇವೆ ಸಲ್ಲಿಸಿ ನಂತರ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಅವರ ನೇತೃತ್ವದ ಈ ಸೌಹಾರ್ದ ಸಹಕಾರಿ ನಿ. ಯಶಸ್ವಿಯಾಗುವದರಲ್ಲಿ ಯಾವುದೇ ಸಂಶಯವಿಲ್ಲ. ಹಾಲಿ ಸದಸ್ಯರು, ಹೊಸ ಗ್ರಾಹಕರು ನಿಶ್ಚಿಂತೆಯಿಂದ ಇಲ್ಲಿ ಹಣ ಠೇವಣಿ ಇಟ್ಟು ವ್ಯಹರಿಸಬಹುದು ಎಂಬ ಅಭಯ ನೀಡಿದರು.
1980 ರಿಂದ 2009 ರವರೆಗೆ ಶ್ರೀ ಗುರುಸಿದ್ದೇಶ್ವರ ಬ್ಯಾಂಕ್ ಅತ್ಯುತ್ತಮವಾಗಿ ವಹಿವಾಟು ನಡೆಸಿ ಮುಂಚೂಣಿ ಸಹಕಾರಿ ಬ್ಯಾಂಕ್ ಸ್ಥಾನ ಪಡೆದು ನಂತರ ದಿವಾಳಿ ಅಂಚಿಗೆ ತಲುಪಿ ತಮ್ಮ ಅಧ್ಯಕ್ಷತೆಯಲ್ಲಿ ಬ್ಯಾಂಕ್‍ನ್ನು ಪುನಶ್ಚೇತನಗೊಳಿಸಿದ್ದನ್ನು ಶಂಕರಣ್ಣ ಅವರು ಇದೇ ಸಂದರ್ಭದಲ್ಲಿ ವಿವರಿಸಿ ಸೌಹಾರ್ದ ಸಹಕಾರಿಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಚುಟುಕಾಗಿ ಮಾರ್ಗದರ್ಶನ ನೀಡಿದರು.
ಬ್ಯಾಂಕ್‍ನ ಸಂಸ್ಥಾಪಕ ಪ್ರಕಾಶ ಜೋಶಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ 350 ಕಾರ್ಮಿಕರಿದ್ದು ಕೊರೊನಾ ಸಂದರ್ಭದಲ್ಲಿ ಅವರ ಸಂಕಷ್ಟ, ಬ್ಯಾಂಕ್‍ಗಳಲ್ಲಿ ಇಂಥವರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ದೊರೆಯದೇ ಪಟ್ಟ ಕಷ್ಟ ನಷ್ಟಗಳನ್ನು ಕಂಡು, ಇಂತಹ ವರ್ಗಗಳವರಿಗೆ ನೆರವಾಗುವ ದಿಸೆಯಲ್ಲಿ ಕಳೆದ 6 ತಿಂಗಳನಿಂದ ಹಿತೈಷಿಗಳು, ಮಿತ್ರರ ಜೊತೆ ಚಿಂಥನ-ಮಂಥನ ನಡೆಸಿ ಈ ಸೌಹಾರ್ದ ಸಹಕಾರಿ ನಿರ್ಮಾಣಕ್ಕೆ ಮುಂದಾಗಲಾಗಿದೆ. ಸಹಕಾರಿ ಇಲಾಖೆಯು ನಮಗೆ ಉತ್ತಮ ಸಹಕಾರ ನೀಡಿದೆ. ಈಗಾಗಲೇ 8 ಲಕ್ಷ ರೂ. ಠೇವಣಿ ಸಂಗ್ರಹವಾಗಿದೆ, ಬರುವ ಮಾರ್ಚ್ ವೇಳೆಗೆ 2 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ರಮೇಶ ಪಾಟೀಲ್ ಸಂಚಾಲಕ ಕೃಷ್ಣಮೂರ್ತಿ ಕಾರಕೂನ, ಲಿಂಗರಾಜ ಕಂಬಳಿ, ಮ್ಯಾನೇಜರ್ ಅಚ್ಚುತ್ತ ಕುಲಕರ್ಣಿ ವೇದಿಕೆಯಲ್ಲಿದ್ದರು.
ನಿರ್ದೇಶಕರುಗಳಾದ ವಲ್ಲಭ ದೇಸಾಯಿ, ಬಿ. ಶ್ಯಾಮಸುಂದರ, ಪ್ರಭು ಜಡಿ, ಸುಭಾಶ್ಚಂದ್ರ ಕಂಬಾಳೆಮಠ, ಭಾರತಿ ಭಟಕೂರ್ಸೆ, ಅಕ್ಷತಾ ರಾಜೀವ ಜೋಶಿ, ಮಂಜಪ್ಪ ಹರಿಜನ, ಮನೋಹರ ತೆಲಗರ, ಗುರುರಾಜ ಬಸಪ್ಪ ಹೂಗಾರ,ಶಿವಪ್ಪ ಈರಪ್ಪ ಬಡಿಗೇರ ಸೇರಿದಂತೆ ಬ್ಯಾಂಕ್‍ನ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.