ಯಶಸ್ಸಿಗೆ ಕಠಿಣ ಶ್ರಮ ಅತ್ಯವಶ್ಯ: ಡಾ.ಎಲಿಗಾರ

ಧಾರವಾಡ ಮಾ.31: ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಲು ಕಠಿಣ ಶ್ರಮ ಅವಶ್ಯಕ. ಅದರಲ್ಲೂ ಮಾಧ್ಯಮ ಕ್ಷೇತ್ರದಲ್ಲಿ ದಿನಂಪ್ರತಿ ಸೃಜನಾತ್ಮಕವಾಗಿ ಮತ್ತು sಸಕಾರಾತ್ಮಕತೆಯಿಂದ ಕಾರ್ಯ ನಿರ್ವಹಿಸುವುದು ಅಗತ್ಯ ಎಂದು ಬೆಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕಿ ಡಾ. ನಿರ್ಮಲಾ ಎಲಿಗಾರ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ನಡೆದ ಮೊಹರೆ ಹನುಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾರು ಅವಕಾಶಗಳನ್ನು ಸುಲಭವಾಗಿ ನೀಡುವುದಿಲ್ಲ. ಅವಕಾಶಗಳಿಗಾಗಿ ಕಾಯುತ್ತ ಕುಳಿತುಕೊಳ್ಳಬಾರದು. ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ನಿಶ್ಚಿತ ಗುರಿ ಇಟ್ಟುಕೊಂಡು ಪ್ರತಿದಿನ ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಪ್ರಮಾಣಿಕತೆಯಿಂದ, ಶ್ರಮ ವಹಿಸಿ ಮಾಡುವ ಕೆಲಸಗಳಿಗೆ ಪ್ರತಿಫಲ ಕಟ್ಟಿಟ್ಟ ಬುತ್ತಿ ಎಂದರು.
ಮಾಧ್ಯಮ ಬರವಣಿಗೆಯಲ್ಲಿ ವಿಷಯ ವಸ್ತು ಬಹು ಪ್ರಮುಖ ಅಂಶ. ಕಂಟೆಂಟ್ ರೈಟಿಂಗ್‍ನಲ್ಲಿ ಪರಿಣಿತಿ ಪಡೆಯಬೇಕಾದರೆ ಹೆಚ್ಚು ಹೆಚ್ಚು ಓದಬೇಕು. ಓದು-ಬರವಣಿಗೆಯೊಂದಿಗೆ ತಾಂತ್ರಿಕ ಕೌಶಲ್ಯಗಳನ್ನು ಸಿದ್ಧಿಸಿಕೊಳ್ಳುವುದು ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಪ್ರೊ. ಜೆ. ಎಂ. ಚಂದುನವರ ಮಾತನಾಡಿ, ಹೊಸತನ್ನು ಹುಡುಕುವ ಪ್ರಯತ್ನ ಪತ್ರಕರ್ತರಿಗೆ ಸದಾ ಇರಬೇಕು. ಸಮಾಜದಲ್ಲಾಗುವ ಸನ್ನಿವೇಶಗಳನ್ನು ಕುತೂಹಲದ ಕಣ್ಣುಗಳಿಂದ ನೋಡುವುದನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಪ್ರಾಯೋಗಿಕ ಕಾರ್ಯ ಚಟುವಟಿಕೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂಜಯಕುಮಾರ ಮಾಲಗತ್ತಿ ಪರಿಚಯಿಸಿದರು, ಅತಿಥಿ ಉಪನ್ಯಾಸಕ ಡಾ. ಮಂಜುನಾಥ ಅಡಿಗಲ್, ವಿಶ್ವಾಸ ಅಂಗಡಿ ಉಪಸ್ಥಿತರಿದ್ದರು. ಸುಷ್ಮಿತಾ ಪಟ್ಟಣಶೆಟ್ಟಿ ಮತ್ತು ಪ್ರಕಾಶಗೌಡ ಪಾಟೀಲ ನಿರೂಪಿಸಿದರು. ಮಾಲಾ ಕರ್ಜಗಿ ಮತ್ತು ಕಮಲ ಮಗಜಿಗೊಂಡ ಪ್ರಾರ್ಥಿಸಿದರು. ಸುಜಾತಾ ಜೊಡಳ್ಳಿ ವಂದಿಸಿದರು.