ಯಶಸ್ವಿ ಶಸ್ತ್ರ ಚಿಕಿತ್ಸೆ: ಮಹಿಳೆ ಹೊಟ್ಟೆಯಲ್ಲಿದ್ದ 8 ಕೆಜಿ ಗೆಡ್ಡೆ ಹೊರ ತೆಗೆದ ವೈದ್ಯರು

ಚಿಕ್ಕನಾಯಕನಹಳ್ಳಿ, ಜು. ೨೩- ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಸುಮಾರು ೮ ಕೆಜಿ ಗೆಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ತಜ್ಞ ವೈದ್ಯ ಡಾ.ಕುಮಾರಸ್ವಾಮಿ ಹೊರ ತೆಗೆದಿದ್ದಾರೆ.
ತಾಲ್ಲೂಕಿನ ಮೈಲುಕುಬ್ಬೆ ಗ್ರಾಮದ ಮಹಿಳೆಯೊಬ್ಬರು ಹಲವಾರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು, ಸೂಕ್ತ ಚಿಕಿತ್ಸೆಗಾಗಿ ಹಲವಾರು ಕಡೆ ಹೋದರೂ ಸಮಸ್ಯೆ ಬಗೆಹರಿದಿರಲಿಲ್ಲ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರಾದ ಕುಮಾರಸ್ವಾಮಿರವರು ಮಹಿಳೆಯ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನು ಪತ್ತೆ ಹಚ್ಚಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಇಷ್ಟು ಪ್ರಮಾಣದ ಗೆಡ್ಡೆ ತಾಲ್ಲೂಕು ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಹೊರ ತೆಗೆಯಲಾಗಿದೆ ಎಂದು ಡಾ. ಕುಮಾರಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕು ಆರೋಗ್ಯ ರಕ್ಷಾ ಕಮಿಟಿ ಸದಸ್ಯ ಮಿಲ್ಟ್ರಿ ಶಿವಣ್ಣ ಮಾತನಾಡಿ, ಸರ್ಕಾರಿ ಆಸ್ಪತ್ರೆ ಎಂದರೆ ಮೂಗುಮುರಿಯುವವರ ಮಧ್ಯೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಡಾ. ಕುಮಾರಸ್ವಾಮಿಯವರು ಮಹಿಳೆಯ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನು ಹೊರತೆಗೆದಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಅನಸ್ತೇಶಿಯಾ ವೈದ್ಯರುಗಳಾದ ಡಾ.ಶ್ರೀಧರ್, ಡಾ. ನಟರಾಜು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.