
ಸಂಜೆವಾಣಿ ವಾರ್ತೆ
ನಂಜನಗೂಡು:ಆ.05:- ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ, ಸಾಂಸ್ಕøತಿಕ ಚಟುವಟಿಕೆಗಳ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕಾಲೇಜಿಗೆ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭವು ಯಶಸ್ವಿಯಾಗಿ ನಡೆಯಿತು. ಸಮಾರಂಭವನ್ನು ಯುವ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಉದ್ಘಾಟಿಸಿ ಮಾತನಾಡುತ್ತಾ ನಾನು ಕೂಡ ಮೈಸೂರಿನಲ್ಲಿ ಪಿಯುಸಿಯಲ್ಲಿ ಪಿಸಿಎಂಬಿ ಯ ಬಯೋಲಜಿ ವಿದ್ಯಾರ್ಥಿಯಾಗಿದ್ದೆ ಡಾಕ್ಟರ್ ಆಗಬೇಕೆಂಬ ಆಸೆಯಿಂದ ಬಯೋಲಜಿ ವಿಷಯ ಆಯ್ಕೆ ಮಾಡಿಕೊಂಡೆ ನಂತರ ಆದ ಬೆಳವಣಿಗೆಯಿಂದ ಪಿಯುಸಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿ ಪಾಸಾದರೂ ಕಾನೂನು ವಿದ್ಯಾರ್ಥಿಯಾಗಬೇಕೆಂಬ ಆಸೆಯಿಂದ ಬೆಂಗಳೂರಿನಲ್ಲಿ 5 ವರ್ಷಗಳ ಕಾಲ ವ್ಯಾಸಂಗ ಮಾಡಿ ಕಾನೂನು ಪದವಿಗಳಿಸಿ ವಕೀಲನಾಗಿ ನನ್ನ ಕಾರ್ಯಾರಂಭ ಪ್ರಾರಂಭಿಸಿದೆ. ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬೆಂಗಳೂರಿನಲ್ಲಿ ಹೈ ಕೋರ್ಟ್ ಮತ್ತು ಲೋಕಾಯುಕ್ತದಲ್ಲಿ ಕೆಲಸ ನಿರ್ವಹಿಸುತ್ತಿದ್ದೆ, ಈ ಭಾಗದ ಸಂಸದರಾಗಿದ್ದ ನನ್ನ ತಂದೆ ಧ್ರುವನಾರಾಯಣ್ ರವರು ಈ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿ ಜನಪರ ಸಂಸದರಾಗಿದ್ದರು, ಅವರ ಅಕಾಲಿಕ ಮರಣದಿಂದ ಈ ಕ್ಷೇತ್ರದ ಮಹಾಜನತೆ ಮತ್ತು ಮುಖಂಡರುಗಳ ಅಭಿಲಾಷೆಯಂತೆ ನನ್ನನ್ನು ಶಾಸಕನಾಗಿ ಬಹುಮತಗಳಿಂದ ಆಯ್ಕೆಮಾಡಿದರು. ಈ ಋಣವನ್ನು ನಾನು ಈ ಕ್ಷೇತ್ರದ ಅಭಿವೃದ್ದಿ ಕೆಲಸಗಳನ್ನು ಮಾಡುವುದರ ಮೂಲಕ ತೀರಿಸುತ್ತೇನೆ ಎಂದರು.
ವಿದ್ಯಾರ್ಥಿಗಳು ಕಾಲೇಜಿಗೆ ತಪ್ಪದೇ ಬರಬೇಕು, ಸಮಯವನ್ನು ಪಾಲಿಸಬೇಕು, ತಮ್ಮ ವಿಷಯಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಉಪನ್ಯಾಸಕರು ನೀಡುವ ಅಮೂಲ್ಯವಾದ ಪಾಠ ಪ್ರವಚನಗಳನ್ನು ಶ್ರದ್ಧೆಯಿಂದ ತಿಳಿದುಕೊಳ್ಳಬೇಕು, ಆಗ ಮಾತ್ರ ನಿಮ್ಮಗಳ ಅಭಿವೃದ್ದಿ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಂದೆ-ತಾಯಂದಿರಿಗೆ ಗೌರವನ್ನು ಕೊಡುವುದರ ಜೊತೆಗೆ ಅವರ ಮಾರ್ಗದರ್ಶನವನ್ನು ಪಡೆದು ಅದರಂತೆ ಕಾರ್ಯ ಪ್ರೌವೃತ್ತರಾಗಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡೆಗಳಿಂದ ಪ್ರತಿಯೊಬ್ಬರು ಉತ್ತಮವಾದ ಆರೋಗ್ಯ ಮತ್ತು ಮನಃಶಾಂತಿಯನ್ನು ಪಡೆಯುವುದರ ಜೊತೆಗೆ ವಿದ್ಯಾಭ್ಯಾಸದಲ್ಲೂ ಅನುಕೂಲಕರ ವಾತಾವರಣ ಉಂಟಾಗುತ್ತದೆ ಎಂದರು.
ನನಗೆ ಪ್ರತಿದಿನ ವಿದ್ಯಾರ್ಥಿಗಳಿಂದ ಕರೆಗಳು ಬರುತ್ತಿದ್ದು ಮುಖ್ಯವಾಗಿ ಬಸ್‍ಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ದೂರುಗಳಿವೆ ಶೀಘ್ರದಲ್ಲೇ ನಂಜನಗೂಡಿಗೆ 100 ಬಸ್‍ಗಳನ್ನು ಒದಗಿಸಿಕೊಡಲು ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಿದ್ದು, ವಿದ್ಯಾರ್ಥಿಗಳ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ ಎಂದರು.
ಸಮಾರಂಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಕುರಟ್ಟಿ ಮಹೇಶ್ ರವರು ಮಾತನಾಡಿ ಈ ಕಾಲೇಜು ಸುಸಜ್ಜಿತವಾಗಿದ್ದರು ಅಗತ್ಯವಾದ ಕೊಠಡಿಗಳ ಅವಶ್ಯಕತೆಯಿದೆ. ಕಳೆದ ಎರಡು ಮೂರು ಸಾಲಿನಲ್ಲಿ ಅತಿ ಹೆಚ್ಚು ಫಲಿತಾಂಶ ನಮ್ಮ ಕಾಲೇಜಿಗೆ ಲಭ್ಯವಾಗಿದ್ದು ಇದೊಂದು ಪ್ರತಿಭಾವಂತರ ಕಾಲೇಜಾಗಿದೆ ಎಂದ ಅವರು ಈ ಕಾಲೇಜಿನ ಪ್ರವೇಶಾತಿಗಾಗಿ ಬೇರೆ ತಾಲ್ಲೂಕು ಮತ್ತು ಜಿಲ್ಲೆಗಳಿಂದಲೂ ವಿದ್ಯಾರ್ಥಿನಿಯರು ಬರುತ್ತಿದ್ದು ಹೆಚ್ಚಿನ ಬೇಡಿಕೆಯಿದೆ. ಈಗ ಇಲ್ಲಿ 1300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಪ್ರವೇಶಾತಿಗಾಗಿ ಇನ್ನೂ ಹೆಚ್ಚಿನ ಬೇಡಿಕೆಯಿದ್ದು ಶಾಸಕರಾದ ದರ್ಶನ್ ರವರು ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಿಕೊಡಲು ಸಂಬಂದಪಟ್ಟ ಸಚಿವರಿಗೆ ಮೊರೆ ಹೋಗಿರುತ್ತಾರೆ ಎಂದರು.
ಇಲ್ಲಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸೌಹಾರ್ಧ ವಾತಾವರಣದಲ್ಲಿ ವ್ಯಾಸಂಗ ಮಾಡುತ್ತಿದ್ದು ಇದೊಂದು ಉತ್ತಮ ಬೆಳವಣಿಗೆ ಎಂದರು.
ಪ್ರಾಚಾರ್ಯರಾದ ಎಸ್.ಎನ್.ಚಂದ್ರಶೇಖರಬಾಬು ರವರು ಮಾತನಾಡಿ ನಮ್ಮ ಕಾಲೇಜು 2022-23 ನೇ ಸಾಲಿನ ಫಲಿತಾಂಶದಲ್ಲಿ 46 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಕಾಲೇಜಿಗೆ ಮತ್ತು ತಾಲ್ಲೂಕಿಗೆ ಕಾರಣರಾಗಿರುತ್ತಾರೆ ಎಂದು ಅಭಿನಂದಿಸಿದರು. ಮತ್ತು ಈ ಕಾಲೇಜಿಗೆ ಸಹಾಯ ಹಸ್ತ ನೀಡುತ್ತಿರುವ ದಾನಿಗಳಿಗೂ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಉತ್ತುಂಗ ಸಾಫ್ಟ್‍ವೇರ್ ಕಂಪನಿಯ ಮಾಲೀಕರು ಹಾಗೂ ಈ ಕಾಲೇಜಿಗೆ ಸಹಾಯಹಸ್ತ ನೀಡಿರುವ ಕುಂಬ್ರಳ್ಳಿ ಕೃಷ್ಣ ರವರು ಮಾತನಾಡುತ್ತಾ ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ಮತ್ತು ನಡೆದುಬಂದ ದಾರಿಯ ಬಗ್ಗೆ ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಧೃಢಮನಸ್ಸಿನಿಂದ ಯಾವುದೇ ಕಾರ್ಯಗಳನ್ನು ಸಾಧಿಸಬಹುದು ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಶಾಲಾ ಅಭಿವೃದ್ದಿ ಸಮಿತಿಯ ಪ್ರಕಾಶ್‍ಚಂದ್‍ಜೈನ್, ಮಮತ, ದೊರೆಸ್ವಾಮಿ, ರಾಜೇಶ್, ಕೆ.ಪಿ.ನಾಗರಾಜು, ಹೇಮಾವತಿ, ವಸಂತಕುಮಾರ್, ನಗರಸಭಾ ಸದಸ್ಯರಾದ ಮಂಗಳಮ್ಮ, ಸ್ವಾಮಿ, ಗಂಗಾಧರ, ಮಹೇಶ್, ಪ್ರದೀಪ್, ನಂಜಮ್ಮಣ್ಣಿ ಗುರುಮಲ್ಲಪ್ಪ, ಕಸಾಪ ಅಧ್ಯಕ್ಷೆ ಲತಾ ಮುದ್ದುಮೋಹನ್, ತಾಪಂ ಮಾಜಿ ಅಧ್ಯಕ್ಷ ನಾಗೇಶ್‍ರಾಜ್, ಪ್ರತಿಧ್ವನಿ ತಾಲ್ಲೂಕು ಅಧ್ಯಕ್ಷ ತ್ರಿಣೇಶ್, ಪ್ರಜ್ಞಾವಂತ ನಾಗರೀಕ ಪಡೆ ಅಧ್ಯಕ್ಷ ಸತೀಶ್, ಡಾ|| ರವಿ.ಡಿ.ಕೆ., ಶಿವಪ್ಪದೇವರು, ಅಬ್ದುಲ್ ಖಾದಿರ್, ಪ್ರಜ್ವಲ್, ಹಿರಿಯ ವಕೀಲ ಹಾಗೂ ಉಪನ್ಯಾಸಕ ಮಹೇಶ್ ಅತ್ತಿಖಾತೆ, ಉಪನ್ಯಾಸಕ ಶಿವಕುಮಾರ್, ಇಂದ್ರ, ಪ್ರಕಾಶ್, ನಟರಾಜ್ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.