ಯಶಸ್ವಿನಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಡಾ.ಬಸವರಾಜೇಂದ್ರ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.26- ಸಾರ್ವಜನಿಕರು ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಯಾದ ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಶಿವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಾ|| ಬಸವರಾಜೇಂದ್ರ ಕರೆ ನೀಡಿದರು.
ಅವರು ನಗರದ ಪಿಡಬ್ಲೂಡಿ ಕಾಲೋನಿಯಲ್ಲಿರುವ ಸಂಘದ ಕಛೇರಿಯಲ್ಲಿ ಏರ್ಪಡಿಸಿದ್ದ ಶಿವ ವಿವಿದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಂಡಲ್ಲಿ ಅನಾರೋಗ್ಯಕ್ಕೀಡಾದಾಗ ತಮಗೆ ಹತ್ತಿರದ ತಾಲ್ಲೂಕು ಕೇಂದ್ರಗಳಲ್ಲಿನ ಪ್ರತಿಷ್ಠಿತ ನೋಂದಾಯಿತ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಆದರೆ ಅನೇಕ ಜನರು ತಪ್ಪು ತಿಳುವಳಿಕೆಯಿಂದ ಇದರ ಪ್ರಯೋಜನ ಪಡೆದುಕೊಳ್ಳದೆ ಹಣ ಕಳೆದುಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಯಶಸ್ವಿನಿ ಯೋಜನೆಗೆ ಸೇರ್ಪಡೆಗೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸಹಕಾರ ಸಂಘಗಳಲ್ಲಿ ಹೆಚ್ಚು ಹೆಚ್ಚು ಷೇರುಗಳನ್ನು ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಿದ ಅವರು, ಇದರಿಂದ ಸಂಘದ ಸದಸ್ಯರಿಗೆ ಆಪತ್ಕಾಲದಲ್ಲಿ ಹೆಚ್ಚಿನ ಸಾಲ ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ತಿಳಿಸಿದರು.
ಯಾವುದೇ ಒಂದು ಸಹಕಾರ ಸಂಘವು ಅಭಿವೃದ್ಧಿ ಆಗಬೇಕಾದರೆ ಸಂಘದಲ್ಲಿ ಹೆಚ್ಚಿನ ಹೂಡಿಕೆ ಅಗತ್ಯ. ಸಾಮಾನ್ಯವಾಗಿ ಬ್ಯಾಂಕ್‍ಗಳಲ್ಲಿ ಸಾಲ ಪಡೆಯಬೇಕಾದರೆ ದಾಖಲೆಗಳನ್ನು ಒದಗಿಸಲು ತುಂಬಾ ಸಮಯ ಬೇಕಾಗುತ್ತದೆ. ಆದರೆ ಸಹಕಾರ ಸಂಘಗಳಲ್ಲಿ ಸದಸ್ಯರಾದವರು ತುಂಬಾ ಸರಳವಾಗಿ ಸಾಲ ಪಡೆಯಬಹುದಾಗಿದೆ. ಅದರಂತೆ ನಮ್ಮ ಸಂಘದಲ್ಲಿಯೂ ಸಹ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ನಿರ್ಮೂಲನೆ ಮಾಡಲು ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸದಸ್ಯರ ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ನಮ್ಮ ಸಂಘದ ವತಿಯಿಂದ ಹಲವಾರು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದ್ದೇವೆ. ವೃತ್ತಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಅದರಂತೆ ಸಹಕಾರ ಸಂಘಗಳಲ್ಲಿ ಸದಸ್ಯರಾಗುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಎಂದು ಹೇಳಿದರು.
ನಂತರ ಸಮಾಜ ಸೇವಕ ಎಲ್. ಸುರೇಶ್ ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಿದ್ಧರಾಜು, ನಾಗರಾಜು, ಕೆಂಪಣ್ಣ, ನಾಗರಾಜು, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅಂಬುಜ ಸೇರಿದಂತೆ ಸಂಘದ ಹಲವಾರು ಸದಸ್ಯರು ಭಾಗವಹಿಸಿದ್ದರು.