
ಬೆಂಗಳೂರು, ಮೇ. ೪- ಯಶವಂತಪುರ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದು ಅಭಿವೃದ್ಧಿ ಪರ್ವ ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಅಭಿವೃದ್ಧಿಯಲ್ಲಿ ನಂಬರ್ ಒನ್ ಆಗಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಅಗರ, ಕಗ್ಗಲಿಪುರ, ತರಳು, ಸೋಮನಹಳ್ಳಿ, ನೆಲಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾತನಾಡಿದರು.
೧೭ ಗ್ರಾಮ ಪಂಚಾಯತಿ, ೭ ಬಿಬಿಎಂಪಿ ವಾರ್ಡ್ ಗಳಿರುವ ಈ ಕ್ಷೇತ್ರ ಗ್ರಾಮೀಣ ಮತ್ತು ನಗರ ಪ್ರದೇಶವನ್ನು ಒಳಗೊಂಡಿದೆ. ಶರವೇಗದಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಈಗಾಗಲೇ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಶಾಲೆ, ಆಸ್ಪತ್ರೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದರು.
ಕೋವಿಡ್‌ನಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಕೊಂಚ ಹಿನ್ನಡೆಯಾಯಿತು. ಆದರೆ ಕ್ಷೇತ್ರದ ಜನತೆಯ ಜೀವ ಉಳಿಸುವುದರ ಜೊತೆಗೆ ಜೀವನ ನಡೆಸಲು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿ ನೆರವು ನೀಡಲಾಗಿದೆ. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ, ಲ್ಯಾಂಡ್ ಮಾಫಿಯಾಗೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.
ಈ ಬಾರಿ ರಾಜ್ಯದ ಜನತೆ ಬಿಜೆಪಿಗೆ ಜನಾಶೀರ್ವಾದ ಮಾಡಲಿದ್ದು ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮುಂದಿನ ದಿನಗಳಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಿದ್ದೇನೆ. ಯಶವಂತಪುರದ ಕಡೆ ಇಡೀ ರಾಜ್ಯ ತಿರುಗಿನೋಡುವಂತೆ ಮಾಡುತ್ತೇನೆ. ನಾನು ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದೇನೆ. ಎಲ್ಲಾ ಕಡೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಸಚಿವರಾದ ಅಮಿತ್ ಶಾ ಅವರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಯಾರು ಏನೇ ಅಪಪ್ರಚಾರ ಮಾಡಿದರೂ ಕ್ಷೇತ್ರದ ಜನತೆ ಅದನ್ನು ನಂಬುವುದಿಲ್ಲ. ಸೋಮಶೇಖರ್ ಯಾರು? ಏನು? ಎಂಬುದು ಗೊತ್ತಿದೆ. ಯಾವ ರೀತಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ನೋಡಿ ನನಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್‌ರವರು ಅಗರ, ಕಗ್ಗಲಿಪುರ ಮತ್ತಿತರ ಕಡೆ ಭರ್ಜರಿ ಪ್ರಚಾರ ನಡೆಸಿದರು. ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.