ಯಶವಂತನಗರದಲ್ಲಿ ಪುರಾಣ ಪ್ರಾರಂಭ


ಸಂಜೆವಾಣಿ ವಾರ್ತೆ
ಸಂಡೂರು: ಏ: 13:  ರಥೋತ್ಸವದ ಅಂಗವಾಗಿ ಪುರಾಣ ಕಾರ್ಯಕ್ರಮದ ಮೂಲಕ ಧರ್ಮಜಾಗೃತಿಯನ್ನು ಉಂಟುಮಾಡುವ ಬಸವತತ್ವವನ್ನು ತಿಳಿಸುವಂತಹ ಮಹತ್ತರ ಕಾರ್ಯ ಇದಾಗಿದೆ, ಪೂಜ್ಯರು ಸರ್ವಧರ್ಮದ ಸಮನ್ವಯ ಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅನ್ನದಾನೀಶ್ವರ ಶಾಖಾಸಂಸ್ಥಾನಮಠ ಕುಕನೂರಿನ ಡಾ. ಮಹಾದೇವ ಮಹಾಸ್ವಾಮಿಗಳು ತಿಳಿಸಿದರು.
ಅವರು ತಾಲೂಕಿನ ಯಶವಂತನಗರ ಗ್ರಾಮದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪುರಾಣ ಪ್ರಾರಂಭದ ಅಂಗವಾಗಿ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲಗೊಂಡು ಮಾತನಾಡಿ ಪ್ರತಿಯೊಬ್ಬರೂ ಸಹ ಬಹಳ ಸಂತಸದಿಂದ ಪಾಲ್ಗೊಂಡಿದ್ದೀರಿ ಅದರ ಪ್ರಯೋಜನವಾಗಬೇಕಾದರೆ ಶಾಂತಿಯಿಂದ ಪುರಾಣ ಪ್ರವಚನ ಕೇಳಬೇಕು, ಇದು ಮನಸ್ಸಿಗೆ ನೆಮ್ಮದಿಯನ್ನು, ಶಿವನ ಅರಾಧನೆಯನ್ನು ತಿಳಿಸುವಂತಹ ಮಹತ್ತರ ಅಂಶ, ಅಲ್ಲದೆ ಸಂಗೀತದಿಂದ ನಮ್ಮ ತನು,ಮನ ಶುದ್ದವಾಗುತ್ತವೆ, ಬಹಳಷ್ಟು ಜನ ಟೀಕಿಸುವವರು ಇದ್ದಾರೆ, ಪ್ರೀತಿಸುವವರು, ಇದ್ದಾರೆ, ಮಾತನಾಡುವವರು ಇದ್ದಾರೆ, ಮೌನವಾಗಿ ಸಾಧಿಸುವವರು ಇದ್ದಾರೆ, ಅದರೆ ಇಂದು ನಾವು ಆಶುಕವಿಗಳಾದ ಕುಮಾರದೇವರು ತಮ್ಮ ಅಮೂಲ್ಯವಾದ ಮಾತುಗಳ ಮೂಲಕ ಶ್ರೀ ಶಂಭುಲಿಂಗೇಶ್ವರ ಪುರಾಣವನ್ನು ಪಠಿಸುತ್ತಾರೆ, ಜ್ಞಾನವನ್ನು ತುಂಬುತ್ತಾರೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಭಾಗಿಯಾಗುವುದರ ಜೊತೆ ಇತರರನ್ನು ಭಾಗಿಗಳಾಗುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬೂದಿಸ್ವಾಮಿ ಹಿರೇಮಠ ಅಂತೂರು ಬೆಂತೂರಿನ ಕುಮಾರದೇವರು ಪುರಾಣ ಪ್ರವಚನ ಮಾಡಿ ಮಾತನಾಡಿ ಪ್ರತಿಯೊಬ್ಬರೂ ಸಹ ಗುರುವಿನಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಶಿವಪಥವನ್ನು ಪಡೆಯಲು ಸಾಧ್ಯ, ಮನುಷ್ಯರ ಬದುಕು ಹಲವು ಜಂಜಡಗಳಿಂದ ತುಂಬಿದೆ, ಅದರಿಂದ ಹೊರಬರಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳು ಅತಿ ಅಗತ್ಯವಾಗಿವೆ, ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾದ ತಾಯಂದಿರು ಇಂದು ಧಾರವಾಹಿಗಳ ದಾಸರಾಗುತ್ತಿದ್ದಾರೆ, ಹೆಣ್ಣುಮಕ್ಕಳೇ ವಿಲನ್ ರೀತಿಯಲ್ಲಿ ಬಿಂಬಿಸುತ್ತಿರುವುದು ಅಪಾಯದ ಸಂಕೇತ , ಕಾರಣ ಉತ್ತಮ ಗುಣಗಳನ್ನು ಬಿತ್ತಬೇಕಾದ ಮಾತೃಹೃದಯ, ಬರೀ ಕಚ್ಚಾಡುವ ಸಂಸ್ಕøತಿಯತ್ತ ವಾಲುತ್ತಿದೆ, ಅಧುನಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ, ಅದರೆ ಸಂಸ್ಕಾರ ಇಲ್ಲವಾಗುತ್ತಿದೆ, ಅದು ಉಂಟಾಗಬೇಕಾದರೆ ಧಾರ್ಮಿಕ ಪ್ರಜ್ಞೆಯನ್ನು ನಮ್ಮ ತಾಯಂದಿರು ಬೆಳಸಿಕೊಂಡು ತಮ್ಮ ಮಕ್ಕಳಿಗೆ ತಿಳಿಸಿದಾಗ ಶುದ್ದ ಸಮಾಜ ನಿರ್ಮಾಣಕ್ಕೆ ಸಾಧ್ಯ ಎಂದು ತಿಳಿಸಿದರು.
ಸಮಾರಂಭದಲ್ಲಿ ಷಟಸ್ಥಳ ಧ್ವಜಾರೋಹಣ ಕಾರ್ಯಕ್ರಮವನ್ನು ಪರತತ್ವಾನಂದ ಮಹಾಸ್ವಾಮಿಗಳು ಶ್ರೀ ದತ್ತಾವಧೂತ ಮಹಾಕ್ಷೇತ್ರ ವೆಂಕಟಾಪುರ-ಹಂಪಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಧ್ವಜಾರೋಹಣ ನಮ್ಮ ಧಾರ್ಮಿಕ ಜಾಗೃತಿಯ ಸಂಕೇತ ಇದನ್ನು ನೆರವೇರಿಸಲು ನಮ್ಮನ್ನು ಅಹ್ವಾನಿಸಿದ್ದು ಹೆಮ್ಮೆ ತಂದಿದೆ ಎಂದರು.
ಯಶವಂತನಗರ ಗ್ರಾಮದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಸಿದ್ದರಾಮೇಶ್ವರ ಸ್ವಾಮಿಯ ರಥೋತ್ಸವವದ ಅಂಗವಾಗಿ ಹಮ್ಮಿಕೊಂಡಿದ್ದ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮಠದ ಶ್ರೀ ಗಂಗಾಧರ ಮಹಾಸ್ವಾಮಿಗಳು ಮಾತನಾಡಿ ಸರ್ವಭಕ್ತರ ಸಹಕಾರ ಹಾಗೂ ಸಿದ್ದರಾಮೇಶ್ವರ ಸ್ವಾಮಿಯ ಕೃಪೆಯಿಂದ ಪ್ರತಿವರ್ಷ ಪುರಾಣ ನಡೆಸುತ್ತಿದ್ದು ಅದಕ್ಕೆ ಬಹಳಷ್ಟು ಮಹಿಳೆಯರು, ದಾಸೋಹ ದಾನಿಗಳು ಮುಂದೆ ಬಂದು ತಾವೆ ನೆರವೇರಿಸುತ್ತಿರುವುದು ಉತ್ತಮ ಕಾರ್ಯವಾಗಿದೆ, ಅದಕ್ಕೆ ಅಕ್ಕನಬಳಗದವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅಲ್ಲದೆ ಚಿತ್ರಿಕಿ ವಿಶ್ವನಾಥವರು ಪೂರ್ಣ ಸಹಕಾರ, ಗ್ರಾಮದ ಎಲ್ಲಾ ಮುಖಂಡರಾದ ಚಿತ್ರಿಕಿ ಸತೀಶ್, ಮಹಾಬಲೇಶ್, ಅಕ್ಕನಬಳಗದ ಅಧ್ಯಕ್ಷರು, ಸದಸ್ಯರು ಗ್ರಾಮದ ಎಲ್ಲಾ ಮುಖಂಡರು ಸಹಕರಿಸಿ ಕಾರ್ಯಕ್ರಮ ಉತ್ತಮವಾಗಿ ನಡೆಯಲು ಕಾರಣರಾಗಿದ್ದು ಸಿದ್ದರಾಮೇಶ್ವರ ಎಲ್ಲ ಭಕ್ತರಿಗೆ ಸನ್ಮಂಗಳ ಉಂಟುಮಾಡಲಿ ಎಂದರು.