“ಯವರತ್ನ”ನ ದರ್ಬಾರ್ ಆರಂಭಕ್ಕೆ ದಿನಗಣನೆ

* ಚಿಕ್ಕನೆಟಕುಂಟೆ ಜಿ.ರಮೇಶ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ “ಯುವರಾಜ”  ತೆರೆಗೆ ಬರಲು ಸಜ್ಜಾಗಿದೆ. ಏಪ್ರಿಲ್ 1 ರಂದು ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಕಮಾಲ್ ಮಾಡಲು ಮುಂದಾಗಿದೆ.

ರಾಜರತ್ನನ ಕುಡಿಯ ಯುವರತ್ನ ಆಗಮನಕ್ಕೆ ಸ್ವಾಗತ ಕೋರಲು ಪವರ್ ಸ್ಟಾರ್ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ಪ್ರವಾಸ ಮುಗಿಸಿದೆ.

ಪುನೀತ್ ರಾಜ್ ಕುಮಾರ್, ಸಂತೋಷ್ ಆನಂದ್ ರಾಮ್ ಮತ್ತು ವಿಜಯ್ ಕಿರಂಗದೂರು ಸತತ ಎರಡನೇ ಬಾರಿಗೆ ಜೊತೆಯಾಗಿದ್ದಾರೆ. ಈ ಜೋಡಿಯ “ರಾಜಕುಮಾರ” ಚಿತ್ರ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಯುವರತ್ನ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಾಗಿದೆ

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಪುನೀತ್ ರಾಜ್ ಕುಮಾರ್, ಜೀವನದಲ್ಲಿ ತಾವು ಏನೇ ಆಗಿದ್ದರೂ ಅದಕ್ಕೆ ಅಪ್ಪಾಜಿ ಕಾರಣ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದೇನೆ. ಯುವರತ್ನ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಭಯ ಆತಂಕವಿದೆ. ಒಳ್ಳೆಯ ಚಿತ್ರ ಮಾಡಿದ ಖುಷಿಯೂ ಒಂದು ಕಡೆ ಇದೆ. ಇನ್ನೇನಿದ್ದರೂ ಚಿತ್ರ ನೋಡಿ ಜನರ ಅಭಿಪ್ರಾಯ ಹೇಳಬೇಕು ಎಂದು ಮಾತಿಗೆ ವಿರಾಮ ಹಾಕಿದರು.

ನಿರ್ದೇಶಕ ಸಂತೋಷ್ ಆನಂದ್ ರಾಮ್ ,ಹ್ಯಾಟ್ರಿಕ್ ಪಟ್ಟ ಶಿವರಾಜ್ ಕುಮಾರ್ ಅವರಿಗೆ ಒಬ್ಬರಿಗೆ ಸಾಕು. ಪ್ರಸ್ತುತ ಶಿಕ್ಷಣದ ವ್ಯವಸ್ಥೆಗೆ ಕನ್ನಡಿ ಹಿಡಿಯಲಾಗಿದೆ.140 ದಿನಗಳ ಕಾಲ ರಾಜ್ಯದ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಪ್ರತಿಯೊಬ್ಬ ಕಲಾವಿದರು ನಮ್ಮ ಸಿನಿಮಾ ಎಂದು ಪ್ರೀತಿ, ಅಭಿಮಾನದಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ.

ನಾಯಕಿಯಾಗಿ ಸಯೇಷಾ ಕಾಣಿಸಿಕೊಂಡಿದ್ದಾರೆ.ಸುಧಾರಾಣಿ, ಅವಿನಾಶ್,ರಂಗಾಯಣ ರಘು, ಅಚ್ಯುತ ಕುಮಾರ್, ಡಾಲಿ ಧನಂಜಯ,ವಿಶಾಲ್ ಹೆಗಡೆ,ರವಿಶಂಕರ್ ಗೌಡ, ರಾಜೇಶ್ ನಟರಂಗ,ಹೀಗೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ ಎಂದು ವಿವರ ನೀಡಿದರು.

ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿ, ಉತ್ತಮ ಸಂದೇಶ ಹೊತ್ತು ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲಾಗುತ್ತಿದೆ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನೆಮ್ಮದಿ ಸಿಕ್ಕಿದೆ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದೇನೆ.ಯುವರತ್ನ ಚಿತ್ರ ಕೊಟ್ಟ ನೆಮ್ಮದಿ ಮತ್ತು ಸಂತೋಷವನ್ನು ಬೇರೆ ಯಾವುದೇ ಚಿತ್ರ ನೀಡಿಲ್ಲ.ಬೇರೆ ಭಾಷೆಯ ಚಿತ್ರರಂಗದ ಮುಂದೆ ಎದೆ ಉಬ್ಬಿಸಿ ಹೇಳುವೆ  ಅಂತಹ ಪಾತ್ರ ಚಿತ್ರದಲ್ಲಿ ಸಿಕ್ಕಿದೆ ಎಂದರು ಹಿರಿಯ ನಟ ಪ್ರಕಾಶ್ ರೈ.

ಕೆಲವು ಸಿನಿಮಾಗಳನ್ನು ಹಣ, ಹೆಸರಿಗಾಗಿ ಮಾಡಿದರೆ ಮತ್ತೆ ಕೆಲವು ಸಿನಿಮಾಗಳನ್ನು ಖುಷಿ ನೆಮ್ಮದಿ ಮಾಡುತ್ತೇವೆ.ಅಂತಂಹ ಚಿತ್ರ ಇದು ಎಂದು ಹೇಳಿಕೊಂಡರು.