ಯಲ್ಲಪ್ಪವರೇ ತಾವು ಜಾದಳ ಮುಖಂಡರೇ ಅಥವಾ ಬಿಜೆಪಿ ಶಾಸಕರ ಏಜೆಂಟರೇ?

ರವಿ ಬೋಸರಾಜು ಹೋರಾಟ – ಆಕ್ಸಿಜನ್ ಕೊರತೆ ನಿವಾರಣೆ
ರಾಯಚೂರು.ಮೇ.೨೦- ಕೊರೊನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಜೀವನ್ಮರಣದ ಜೊತೆ ಸಂಘರ್ಷ ನಡೆಸುತ್ತಿದ್ದ ಸಂದರ್ಭದಲ್ಲಿ ರವಿ ಬೋಸರಾಜು ಮತ್ತು ನಾವು ನಗರಸಭೆ ಸದಸ್ಯರು ಆಕ್ಸಿಜನ್ ಸಿಲಿಂಡರ್‌ಗಾಗಿ ಹೋರಾಟ ನಡೆಸಿ, ಜಿಲ್ಲಾಡಳಿತ ಮೇಲೆ ಒತ್ತಡವೇರಿ, ಕೊನೆಗೂ ಆಕ್ಸಿಜನ್ ಪೂರೈಸುವಲ್ಲಿ ಯಶಸ್ವಿಯಾದಂತಹ ಘಟನೆಯನ್ನು ಕಾಂಗ್ರೆಸ್ ಫೋಸ್ ಕೊಡುವ ರಾಜಕೀಯವೆಂದ ನಗರಸಭೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಪಿ.ಯಲ್ಲಪ್ಪ ಅವರ ಹೇಳಿಕೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆಂದು ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ನಗರ ಅಧ್ಯಕ್ಷ ಸುಭಾಷ್ ಆರ್. ಅವರು ತಿರುಗೇಟು ನೀಡಿದ್ದಾರೆ.
ಅಂದು ನವೋದಯ ವೈದ್ಯಕೀಯ ಆಸ್ಪತ್ರೆಗೆ ಆಕ್ಸಿಜನ್ ಕೊರತೆಯ ಬಗ್ಗೆ ಮಾಹಿತಿ ತಿಳಿಯಲು ಸ್ವತಃ ಮಾಧ್ಯಮದವರು ಭೇಟಿ ನೀಡಿದ್ದರು. ಅಲ್ಲದೇ, ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್. ರೆಡ್ಡಿ ಅವರು ಆಕ್ಸಿಜನ್ ಕೊರತೆ ಬಗ್ಗೆ ಸ್ವತಃ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ್ದರು. ಈ ವಿಷಯವನ್ನು ಅಧ್ಯಕ್ಷ ಎಸ್.ಆರ್. ರೆಡ್ಡಿ ಅವರಿಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದರ ಮಾಹಿತಿಯಿಲ್ಲದೇ ರವಿ ಬೋಸರಾಜು ಅವರ ಸತ್ಯಾಗ್ರಹ ಬಗ್ಗೆ ಟೀಕೆ ಮಾಡಿದ ಯಲ್ಲಪ್ಪ ಅವರ ವರ್ತನೆ ಖಂಡನೀಯವಾಗಿದೆ. ಆಕ್ಸಿಜನ್ ಕೊರತೆ ಮತ್ತು ಸಂಗ್ರಹದ ಬಗ್ಗೆ ಎಸ್.ಆರ್. ರೆಡ್ಡಿ ಮತ್ತು ಶಾಸಕ ಡಾ.ಶಿವರಾಜ ಪಾಟೀಲ್ ಅವರ ಹೇಳಿಕೆಗಳು ಮಾಧ್ಯಮದಲ್ಲಿ ಲಭ್ಯವಿವೆ. ಅದನ್ನು ಯಲಪ್ಪ ಅವರು ಪರಿಶೀಲಿಸಿ, ಹೇಳಿಕೆ ನೀಡಬೇಕಾಗಿತ್ತು. ರಾಜಕೀಯ ಬಗ್ಗೆ ಮಾತನಾಡುವ ಯಲ್ಲಪ್ಪ ಅವರು, ತಮ್ಮ ರಾಜಕೀಯದ ನಿಲುವು ಏನು ಎನ್ನುವುದು ಮೊದಲು ಸ್ಪಷ್ಟ ಪಡಿಸಬೇಕು. ಅವರು ಜಾದಳ ಪಕ್ಷದವರೇ ಅಥವಾ ಬಿಜೆಪಿ ಪಕ್ಷದವರೇ ಎನ್ನುವುದು ಹೇಳಬೇಕು. ಜಾದಳ ಪಕ್ಷದಲ್ಲಿದ್ದು ಡಾ.ಶಿವರಾಜ ಪಾಟೀಲ್ ಅವರ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು.
ಒಂದೆಡೆ ಜಾದಳ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಶಾಸಕರು ಬಿಜೆಪಿ ಸರ್ಕಾರ ಸರಿಯಾದ ಸೌಕರ್ಯ ನೀಡಿಲ್ಲವೆಂದು ಆರೋಪಿಸುತ್ತಿದ್ದರೇ, ಮತ್ತೊಂದೆಡೆ ಜಿಲ್ಲಾಧ್ಯಕ್ಷ ವಿರುಪಾಕ್ಷಿ ಅವರು, ಉಸ್ತುವಾರಿ ಸಚಿವರು, ಶಾಸಕರಿಗೆ ಬಳೆ, ಕುಂಕುಮ, ಹೂವು ನೀಡುವ ಸವಾಲ್ ಹಾಕುತ್ತಿದ್ದರೇ, ಅದೇ ಪಕ್ಷದ ಯಲ್ಲಪ್ಪ ಅವರು ಇಲ್ಲಿ ಶಾಸಕರ ಅಭಿವೃದ್ಧಿ ಬಗ್ಗೆ ಹೇಳುತ್ತಿರುವುದು ವಿಚಿತ್ರವಾಗಿದೆ. ಈ ಎಲ್ಲಾ ವಿದ್ಯಾಮಾನಗಳನ್ನು ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ವೆಂಕಟರಾವ್ ನಾಡಗೌಡ ಅವರು ಗಮನಿಸಬೇಕು.
ಯಲ್ಲಪ್ಪ ಅವರು ಜೆಡಿಎಸ್ ಪಕ್ಷಕ್ಕೆ ದ್ರೋಹವೆಸಗಿ, ಶಾಸಕ ಡಾ.ಶಿವರಾಜ ಪಾಟೀಲ್ ಅವರ ಒತ್ತೆಯಾಳಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರದ ಅಭಿವೃದ್ಧಿಗೆ ಭಾರೀ ಅನುದಾನ ತಂದಿದ್ದಾರೆಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರ ಅಭಿವೃದ್ಧಿ ಜನರಿಗೆ ಗೊತ್ತಿದೆ. ಕೊರೊನಾ ವಿಷಯದಲ್ಲಿ ಯಾವ ರೀತಿಯ ನೆರವು ನೀಡಲಾಗಿದೆ ಎನ್ನುವುದನ್ನು ಕೊರೊನಾ ಪೀಡಿತರು ಮತ್ತು ಅವರ ಕುಟುಂಬದವರು ಪ್ರತಿಯೊಂದನ್ನು ಕಂಡಿದ್ದಾರೆ. ಯಲ್ಲಪ್ಪ ಅವರು ಶಾಸಕರ ಪರವಾಗಿ ಮಾತನಾಡುವುದಿದ್ದರೇ, ಜಾದಳ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರಿಂದ ನಾವು ತಿರುಗುತ್ತೇವೆ. ನಮ್ಮ ವಾರ್ಡ್ ಅಭಿವೃದ್ಧಿಗಾಗಿ ನಾವು ನಮ್ಮ ನಾಯಕರ ಜೊತೆ ನೇತೃತ್ವದಲ್ಲಿ ಹೋಗುತ್ತೇವೆ. ಆಯಾ ಪಕ್ಷದ ನಗರಸಭೆ ಸದಸ್ಯರು ಅವರ ಪಕ್ಷದ ನಾಯಕರ ಜೊತೆ ಗುರುತಿಸಿಕೊಳ್ಳುತ್ತಾರೆ. ಶಾಸಕ ಡಾ.ಶಿವರಾಜ ಪಾಟೀಲ್ ಅವರ ಜೊತೆಯೂ ಅವರ ಬೆಂಬಲಿಗರು ಮತ್ತು ನಗರಸಭೆ ಸದಸ್ಯರು ತಿರುಗುತ್ತಾರೆ. ಇವರೂ ಫೋಸ್‌ಗಾಗಿ ತಿರುಗುತ್ತಾರೆಯೇ ಎಂದು ತಿರುಗೇಟು ನೀಡಿದ ಅವರು, ರವಿ ಬೋಸರಾಜು ಅವರ ಹೋರಾಟದಿಂದಾಗಿ ಆಕ್ಸಿಜನ್ ಪರಿಸ್ಥಿತಿ ಸುಧಾರಿಸಿದೆ. ಸೋಂಕಿತರಿಗೆ ಉತ್ತಮ ಸೌಲಭ್ಯ ದೊರೆಯಲು ಅನುಕೂಲವಾಗಿದೆಂದು ಯಲ್ಲಪ್ಪ ಅವರು ಮರೆಯುವಂತಿಲ್ಲ.