ಯಲಹಂಕ ತಾಲ್ಲೂಕು ಪಂಚಾಯಿತಿ ಕೈ ವಶ

ಬೆಂಗಳೂರು, ಜ. ೧೪- ಯಲಹಂಕ ತಾಲೂಕು ಪಂಚಾಯಿತಿ ತಾ.ಪಂ.ಅಧ್ಯಕ್ಷರಾಗಿ ಯಶೋಧಮ್ಮ ಮುನಿರಾಜು ಹಾಗೂ ಉಪಾಧ್ಯಕ್ಷರಾಗಿ ಸುಜಾತ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯಲಹಂಕ ತಾಲೂಕು ಪಂಚಾಯಿತಿಯಲ್ಲಿ ೧೭ ಸದಸ್ಯ ಬಲವಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು.
ಬೆಳಗ್ಗೆ ೧೦.೩೦ಕ್ಕೆ ಚುನಾವಣಾಧಿಕಾರಿ ಎಸಿ ರಂಗನಾಥ್ ಅವರಿಗೆ ಉಮೇದುವಾರಿಕೆ ಸಲ್ಲಿಸಲಾಯಿತು.
ಯಲಹಂಕ ತಾಲೂಕು ಪಂಚಾಯಿತಿಯಲ್ಲಿ ಒಟ್ಟು ೧೭ ಸದಸ್ಯರಿದ್ದಾರೆ. ಇದರ ಪೈಕಿ ಕಾಂಗ್ರೆಸ್ ಗೆ ೧೧ಸದಸ್ಯಬಲವಿದೆ.ಬಿಜೆಪಿ ೫, ಜೆಡಿಎಸ್ ೧ ಸದಸ್ಯಬಲವಿದೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಯಶೋಧ ಮುನಿರಾಜು,ಬಿಜೆಪಿಯಿಂದ ಕಸಘಟ್ಟಪುರ ಪಂಚಾಯಿತಿಯ ಕಮಲಮ್ಮ ಗೋಪಣ್ಣ ನಾಮ ಪತ್ರ ಸಲ್ಲಿಸಿದ್ದರು. ಆದರೆ, ಆಯ್ಕೆ ಪ್ರಕ್ರಿಯೆ ವೇಳೆ ಗೈರುಹಾಜರಾದರು.
ಚುನಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಕೈ ಮೇಲೆತ್ತುವ ಮೂಲಕ ಸದಸ್ಯರು ಮತದಾನ ಮಾಡಿದರು. ಜೊತೆಗೆ, ಸಿಂಗನಾಯಕನಹಳ್ಳಿ ಅನುಸೂಯಮ್ಮ, ಹುರಳಿಚಿಕ್ಕನಹಳ್ಳಿ ಲಕ್ಷ್ಮಿ, ಬೆಟ್ಟಹಲಸೂರು ನಾಗರಾಜು.ಬಿ.ಕೂಡಾ ಗೈರಾಗಿದ್ದರಿಂದ ಬಿಜೆಪಿ ಸದಸ್ಯಬಲ ಒಂದಕ್ಕೆ ಸೀಮಿತವಾಯಿತು.
ಸಂಭ್ರಮಾಚರಣೆ:
ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನೇತೃತ್ವದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು, ಅಭಿಮಾನಿಗಳು ಯಲಹಂಕ, ಹುಣಸಮಾರನಹಳ್ಳಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಬಳಿಕ ಬ್ಯಾಟರಾಯನಪುರ ಶಾಸಕ ಕೃಷ್ಣಭೈರೇಗೌಡರ ಕಚೇರಿಗೆ ತೆರಳಿ ಸಿಹಿಹಂಚಿದರು. ಶಾಸಕ ಕೃಷ್ಣಭೈರೇಗೌಡ ಹೂಗುಚ್ಚ ನೀಡಿ ಅಭಿನಂದನೆ ತಿಳಿಸಿದರು. ನಂತರ ಮಾತನಾಡಿದ ಕೃಷ್ಣಭೈರೇಗೌಡ, ತಾಲೂಕು ಪಂಚಾಯಿತಿ ಸದಸ್ಯರ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ತಾಲೂಕಿನ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಇದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಈ ವೇಳೆ ಯಲಹಂಕ ಕ್ಷೇತ್ರ ಕಾಂಗ್ರೆಸ್ ಮುಖಂಡರಾದ ಎಂ.ಎನ್.ಗೋಪಾಲಕೃಷ್ಣ, ಎಸ್.ಬಿ.ಭಾಷಾ, ಶ್ರೀನಿವಾಸ್, ಮುನಿರಾಜು(ಡಿ.ಸಿ), ಜಿ.ಪಂ.ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್, ಬ್ಯಾಟರಾಯನಪುರ ಕಾಂಗ್ರೆಸ್ ಮುಖಂಡರಾದ ಜೆ.ಶ್ರೀನಿವಾಸ್, ಜಯಗೋಪಾಲಗೌಡ,ಕೆ.ಅಶೋಕನ್, ರಾಜಕುಮಾರ್, ತಾ.ಪಂ.ಸದಸ್ಯ ಉದಯ್ ಕುಮಾರ್, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಸೇರಿದಂತೆ ಇನ್ನಿತರರಿದ್ದರು.