
ಬೆಂಗಳೂರು: ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ರಾಜ್ಯ ಸುಭೀಕ್ಷೆಯಿಂದಿರಲಿ ಎಂಬ ನಿಟ್ಟಿನಲ್ಲಿ ಯಲಹಂಕದ ರೈಲ್ವೆಗಾಲಿ ಕಾರ್ಖಾನೆ ಕ್ರೀಡಾಂಗಣದಲ್ಲಿ ಫೆ.೨೫ರಂದು ಅದ್ದೂರಿ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ,ಟಿಟಿಡಿ ಸದಸ್ಯ ಎಸ್.ಆರ್.ವಿಶ್ವನಾಥ್, ಯಲಹಂಕದ ಇತಿಹಾಸದಲ್ಲೆ ಮೊದಲ ಬಾರಿಗೆ ತಿರುಪತಿಯಿಂದ ವೆಂಕಟೆಶ್ವರ ಸ್ವಾಮಿ ಮೂರ್ತಿಯನ್ನು ತಂದು ಕಲ್ಯಾಣೋತ್ಸವ ಮಾಡಲಾಗುತ್ತಿದೆ. ತಿರುಮಲ ದೇವಾಲಯದ ಪ್ರಧಾನ ಅರ್ಚಕರು ಸೇರಿ ಸುಮಾರು ೫೦ಕ್ಕೂ ಹೆಚ್ಚು ಜನರ ತಂಡದಿಂದ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಅಂದು ಸಂಜೆ ೫ಗಂಟೆಯಿಂದ ಆರಂಭಗೊಳ್ಳಲಿದ್ದು ಪೂಜಾ ಕೈಂಕರ್ಯಗಳು ಸೇರಿದಂತೆ ದೇವನಾಮ,ನೃತ್ಯದೊಂದಿಗೆ ಸ್ವಾಮಿ ಆರಾಧನೆ ನಡೆಯಲಿದೆ. ಸಾಕಷ್ಟು ಜನರಿಗೆ ತಿರುಪತಿಯಲ್ಲಿ ನಡೆಯುವ ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.ಇಲ್ಲಿ ನೇರವಾಗಿ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು.
ಬರುವ ಭಕ್ತಾಧಿಗಳಿಗೆ ತಿರುಪತಿಯಿಂದ ಲಡ್ಡು ತೀರ್ಥಪ್ರಸಾದ ತರಿಸಿ ವಿತರಿಸಲಾಗುತ್ತಿದೆ. ಈಗಾಗಲೇ ಇದಕ್ಕಾಗಿ ೫೦ಸಾವಿರದಷ್ಟು ಪ್ರಸಾದ ಚೀಟಿ ವಿತರಿಸಲಾಗಿದೆ ಎಂದರು.